ADVERTISEMENT

ಒತ್ತುವರಿ, ದಾಖಲೆಯಲ್ಲೇ ‘ಕತ್ತರಿ’: ನಡೆದಿಲ್ಲ ತೆರವು ಕಾರ್ಯಾಚರಣೆ...

ಮೈಸೂರು, ಮಾಗಡಿ, ತುಮಕೂರು, ಕನಕಪುರ ರಸ್ತೆ ಜಲಾವೃತ; ಪೀಣ್ಯ ಕೈಗಾರಿಕೆ ಪ್ರದೇಶದಲ್ಲೂ ನೀರು

Published 14 ಸೆಪ್ಟೆಂಬರ್ 2022, 20:19 IST
Last Updated 14 ಸೆಪ್ಟೆಂಬರ್ 2022, 20:19 IST
   

ಬೆಂಗಳೂರು: ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆಗಳ ಜಲಾವೃತಕ್ಕೆ ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿ ರಾಜರಾಜೇಶ್ವರಿ ನಗರ ವಲಯದಲ್ಲಿವೆ. ಪ್ರತಿಷ್ಠಿತ ಬಡಾವಣೆ, ಖ್ಯಾತನಾಮರೆಲ್ಲ ನೆಲೆಸಿರುವುದು ಈ ವಲಯದಲ್ಲೇ. ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಆಗಾ‌ಗ್ಗೆ ಮಳೆನೀರು ಆವರಿಸಲು ಕಾರಣ ವಾಗಿರುವುದೂ ಇಲ್ಲಿರುವರಾಜಕಾಲುವೆಗಳಒತ್ತುವರಿಯೇ.ಇಷ್ಟಾದರೂಬಿಬಿಎಂಪಿ ಅಧಿ ಕಾರಿಗಳ ಲೆಕ್ಕದಲ್ಲಿ ಈ ವಲಯದಲ್ಲಿ ಅತಿ ಕಡಿಮೆ ಒತ್ತುವರಿ ಇದೆ. ಆದರೆ, ನಕ್ಷೆ ಹೇಳುವುದೇ ಬೇರೆ.

ರಾಜರಾಜೇಶ್ವರಿನಗರ ವಲಯದಲ್ಲಿ ರಾಜರಾಜೇಶ್ವರಿನಗರ, ಯಶವಂತಪುರ ವಿಧಾನಸಭೆ ಕ್ಷೇತ್ರಗಳಿವೆ. ಈ ವಲಯದ ವ್ಯಾಪ್ತಿ ಕನಕಪುರ, ಮೈಸೂರು, ಮಾಗಡಿ, ತುಮಕೂರು ಕೊನೆಗೆ ಬಹುತೇಕ ಬಳ್ಳಾರಿ ರಸ್ತೆಯವರೆಗೂ ಇದೆ. ಇಷ್ಟೂ ರಸ್ತೆಗಳ ಸುತ್ತಮುತ್ತ ರಾಜಕಾಲುವೆ ಒತ್ತುವರಿಯಾಗಿ ನೀರು ಆವರಿಸಿಕೊಳ್ಳುತ್ತದೆ. ಆದರೆ, ಬಿಬಿಎಂಪಿ ಅಧಿಕಾರಿ ಈ ರಸ್ತೆಗಳಲ್ಲಿ ಸಮಸ್ಯೆ ಯಾದಾಗ ರಾಜಕಾಲುವೆಗಳ ಒತ್ತುವರಿ ಬಗ್ಗೆ ಮಾತನಾಡುವುದೇ ಇಲ್ಲ.

ರಾಜಕಾಲುವೆಯ ಅಭಿವೃದ್ಧಿಯಲ್ಲೂ ಒಂದು ಕಡೆ ಸಿಮೆಂಟ್‌ ಗೋಡೆ, ಮೇಲ್ಭಾಗದ ಫೆನ್ಸಿಂಗ್‌ ಇದ್ದರೆ, ಮತ್ತೊಂದೆಡೆ ಒತ್ತುವರಿಯಿಂದ ಕೂಡಿದ ಮಣ್ಣಿನ ಕಾಲುವೆಯೇ ಇದೆ. ಉದಾಹರಣೆಗೆ ಪದ್ಮಾವತಿ–ಮೀನಾಕ್ಷಿ ಕಲ್ಯಾಣ ಮಂಟಪದಿಂದ ಕೆಂಚೇನಹಳ್ಳಿ ಕೆರೆವರೆಗಿನ ರಾಜ ಕಾಲುವೆ. ಈ ವಲಯದಲ್ಲಿ ರಾಜ ಕಾಲುವೆಗಳ ಗಾತ್ರವನ್ನೂ ಅರ್ಧಕ್ಕಿಂತ ಕಡಿಮೆಗೆ ಇಳಿಸಲಾಗಿದೆ. ಪ್ರತಿಷ್ಠಿತರ ಒತ್ತುವರಿಗಳನ್ನು ಕೆರೆ ಸೇರಿ ರಾಜಕಾಲುವೆಯಲ್ಲಿ ತೆರವು ಮಾಡಿಲ್ಲ. ಒಂದೆರಡು ವರ್ಷಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿದ್ದ ಈ ಭಾಗದ ಒತ್ತುವರಿ ತೆರವು, ಅದಾದ ನಂತರ ತಣ್ಣಗಾಗಿದೆ. ಮತ್ತಷ್ಟು ಒತ್ತುವರಿಯೂ ಆಗಿದೆ. ಆದರೆ, ಬಿಬಿಎಂಪಿ ದಾಖಲೆಯಲ್ಲಿ ಇದೆಲ್ಲ ಇಲ್ಲ.

ADVERTISEMENT

ಮೈಸೂರು ರಸ್ತೆಯ ನಾಯಂಡಹಳ್ಳಿ ಕೆರೆ, ಆರ್‌.ಆರ್‌. ನಗರದ ಹಲಗೆವಡೇರ ಹಳ್ಳಿ ಕೆರೆ, ಅತ್ಯಂತ ಹೈಟೆಕ್‌ ಆಗಿ ಅಭಿವೃದ್ಧಿಯಾಗುತ್ತಿರುವ ಮಲ್ಲತ್ತಹಳ್ಳಿ ಕೆರೆ, ಜೆ.ಪಿ. ಪಾರ್ಕ್‌–ಮತ್ತಿಕೆರೆ, ದೊಡ್ಡ ಬಿದರಕಲ್ಲು, ಲಿಂಗಧೀರನಹಳ್ಳಿ, ನರಸಪ್ಪನಹಳ್ಳಿ, ದುಬಾಸಿಪಾಳ್ಯ, ಅಂದ್ರಹಳ್ಳಿ, ಉಲ್ಲಾಳು, ಕೆಂಗೇರಿ, ಕೋನ ಸಂದ್ರ ಕೆರೆಗಳ ಸುತ್ತಲಿನ ರಾಜಕಾಲುವೆಗಳು ಬಹುತೇಕ ಮಾಯವಾಗಿವೆ. ಇನ್ನು ಲಗ್ಗೆರೆಯಲ್ಲಿ ರಾಜಕಾಲುವೆಗಳ ಕುರುಹೂ ಕಾಣುವುದಿಲ್ಲ. ಮಳೆ ಬಂದಾಗ ನೀರು ರಸ್ತೆ, ಬಡಾವಣೆಗಳಲ್ಲೇ ಇರುತ್ತದೆ ಎಂಬುದು ಸಂಕಷ್ಟ ಅನುಭವಿಸಿದವರ ಮಾತು.

ಯಾರ ಸ್ಪಂದನೆಯೂ ಇಲ್ಲ

ಜ್ಞಾನಭಾರತಿ ವಾರ್ಡ್‌ನಲ್ಲಿ ಐದಾರು ವರ್ಷಗಳಿಂದ ಅನೇಕ ಬಡಾವಣೆಗಳ ನೀರುಗಾಲುವೆ ಸ್ವಚ್ಛ ಮಾಡದೆ ತುಂಬಾ ಹೂಳು, ಕಸ ತುಂಬಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರಾಜಕಾಲುವೆ ಒತ್ತುವರಿಯಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಆರೋಗ್ಯ ಬಡಾವಣೆ, ಆರ್‌ಎಚ್‌ಸಿಎಸ್‌ ಬಡಾವಣೆ, ಎನ್.ಜಿ.ಎಫ್, ನಾಗರಬಾವಿ ಇನ್ನಿತರ ಪ್ರದೇಶಗಳ ಮನೆಗಳು ಮುಳುಗಿದ್ದು, ವಾಹನಗಳು ತೇಲಾಡಿದವು‌. ಶ್ರೀಗಂಧ ಕಾವಲು ಕೆರೆ, ಕಾಲುವೆ ಇಲ್ಲದಂತಾಗಿದ್ದು, ಶ್ರೀಗಂಧ ಕಾವಲು ರಸ್ತೆ ಮಳೆ ಬಂದಾಗ ಕೆರೆಯಂತಾಗುತ್ತದೆ.

ಶೋಭಾ ಭಟ್‌,ಸಂಸ್ಥಾಪನಾ ಕಾರ್ಯದರ್ಶಿ, ಉಸಿರು ಫೌಂಡೇಷನ್

ಒತ್ತುವರಿ ಮುಚ್ಚಿಡುತ್ತಿದ್ದಾರೆ...

ದುಬಾಸಿಪಾಳ್ಯ ಕೆರೆ ಕೋಡಿ ಹರಿದು ಮೈಸೂರು ರಸ್ತೆಯ ಮೈಲಸಂದ್ರದ ಬಳಿ ವೃಷಭಾವತಿಗೆ ಸೇರುವ ರಾಜಕಾಲುವೆ ಸಂಪೂರ್ಣ ಒತ್ತುವರಿಯಾಗಿದೆ. ಹೀಗಾಗಿಯೇ ಮೆಟ್ರೊ ಪಿಲ್ಲರ್‌ಗೂ ಹಾನಿಯಾಗಿತ್ತು. ಮೈಸೂರು ರಸ್ತೆಯ ಮೈಲಸಂದ್ರ ಬಳಿ ಮಳೆ ಬಂದಾಗ ರಸ್ತೆ ಜಲಾವೃತ ಆಗುತ್ತಲೇ ಇರುತ್ತದೆ. ರಾಜಕಾಲುವೆಗಳು ಅತ್ಯಂತ ಹೆಚ್ಚು ಒತ್ತುವರಿಯಾಗಿದ್ದು, ಅಧಿಕಾರಿಗಳು ಎಲ್ಲವನ್ನೂ ಮುಚ್ಚಿಡುತ್ತಿದ್ದಾರೆ. ಇರುವ ಕಾಲುವೆಗಳು ಸಣ್ಣ ರಸ್ತೆಯ ಮೋರಿಗಳಂತಾಗಿವೆ.

ಟಿ.ಇ. ಶ್ರೀನಿವಾಸ್‌,ರಾಜರಾಜೇಶ್ವರಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.