ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ ನಿರ್ಮಿಸಿದ್ದ ಸಮಯದಿಂದಲೂ ಒತ್ತುವರಿಯಾಗಿಯೇ ಉಳಿದಿದ್ದ ಉದ್ಯಾನದ ಜಾಗವನ್ನು 30 ವರ್ಷದ ನಂತರ ಬಿಬಿಎಂಪಿ ವಶಕ್ಕೆ ಪಡೆದಿದೆ.
ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿರುವ ಇಸ್ರೊ ಬಡಾವಣೆಯಲ್ಲಿ ಬಿಡಿಎ ಉದ್ಯಾನಕ್ಕೆಂದು ಜಾಗವನ್ನು ಮೀಸಲಿಟ್ಟಿತ್ತು. ಬಿಬಿಎಂಪಿಗೆ ಬಡಾವಣೆಯನ್ನು ಹಸ್ತಾಂತರ ಮಾಡುವಾಗಲೂ ಈ ಪ್ರದೇಶ ಒತ್ತುವರಿಯಾಗಿತ್ತು. ಈ ಪ್ರದೇಶದ ಒತ್ತುವರಿ ಇದೀಗ ತೆರವಾಗಿದ್ದು, ಹಸಿರೀಕರಣ ಮಾಡುವತ್ತ ಮುಂದಡಿ ಇರಿಸಿದೆ.
ಪದ್ಮನಾಭನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿ ತಾಲ್ಲೂಕು ಬಿಕಾಸಿಪುರ ಗ್ರಾಮದ ಸರ್ವೆ ನಂಬರ್ 1ರಲ್ಲಿ 2 ಎಕರೆ 20 ಗುಂಟೆ ಜಮೀನನ್ನು ಬಿಡಿಎ ಇಸ್ರೊ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿತ್ತು. ಆದರೆ, ಈ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. ವೃತ್ತಾಕಾರದಲ್ಲಿ ಸಾಗುವ ರಾಜಕಾಲುವೆಯ ಅಕ್ಕಪಕ್ಕವೇ ಇರುವ ಈ ಜಮೀನಿನಲ್ಲಿ ಶೆಡ್ ಹಾಗೂ ಇತರೆ ನಿರ್ಮಾಣಗಳಿದ್ದವು. ಬಡಾವಣೆಯನ್ನು ಬಿಬಿಎಂಪಿಗೆ ಬಿಡಿಎ ಹಲವು ವರ್ಷಗಳ ಹಿಂದೆಯೇ ಹಸ್ತಾಂತರಿಸಿತ್ತು.
ಉದ್ಯಾನಕ್ಕಾಗಿಯೇ ಮೀಸಲಿಟ್ಟ ಜಾಗವನ್ನು ತೆರವುಗೊಳಿಸಲು ಬಿಬಿಎಂಪಿ ಹಲವು ಬಾರಿ ಪ್ರಯತ್ನಿಸಿತ್ತು. ಸ್ಥಳೀಯ ಲಾಬಿಯಿಂದ ಯಶಸ್ಸು ಸಿಕ್ಕಿರಲಿಲ್ಲ. ಎರಡು ತಿಂಗಳ ಹಿಂದೆ ಎಲ್ಲ ರೀತಿಯ ದಾಖಲೆಗಳನ್ನೂ ಸಂಗ್ರಹಿಸಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಎಂಜಿನಿಯರ್‌ಗಳು ಒತ್ತುವರಿಯನ್ನು ತೆರವುಗೊಳಿಸಿದರು.
ರಾಜಕಾಲುವೆ ಸುತ್ತಲಿರುವ ಈ ಪ್ರದೇಶದ ಸುತ್ತಲೂ ತಡೆಗೋಡೆ ನಿರ್ಮಿಸಿ, ಚರಂಡಿ ಮೂಲಕ ನೀರು ಹರಿಯವ ವ್ಯವಸ್ಥೆಯನ್ನು ಮಾಡಲಾಗಿದೆ. ತಗ್ಗು ಪ್ರದೇಶವಾಗಿದ್ದ ಕಾರಣ, ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿ ರಸ್ತೆಯ ಮಟ್ಟಕ್ಕೆ ತರಲಾಗಿದೆ. ಉದ್ಯಾನದ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ಮೂರು ತಿಂಗಳಲ್ಲಿ ಮುಗಿಯಲಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಎಂಜಿನಿಯರ್ ತಿಳಿಸಿದರು.
‘ರಾಜಕಾಲುವೆ ಸುತ್ತಲೂ ವೃತ್ತಾಕಾರದಲ್ಲಿರುವ ಈ ಪ್ರದೇಶದಲ್ಲಿ ಹಲವು ರೀತಿಯ ಸೌಲಭ್ಯಗಳನ್ನು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಒಂದು ಕಡೆ, ವೃಕ್ಷ ವನವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮತ್ತೊಂದೆಡೆ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ಲಾನ್‌ನಂತಹ ವ್ಯವಸ್ಥೆ ಇಲ್ಲಿ ಇರುವುದಿಲ್ಲ. ವಾಯುವಿಹಾರಿಗಳಿಗೆ ‘ವಾಕಿಂಗ್ ಟ್ರ್ಯಾಕ್’ ಮಾತ್ರ ನಿರ್ಮಿಸಲಾಗುತ್ತಿದೆ. ಉಳಿದ ಪ್ರದೇಶವನ್ನೆಲ್ಲ ಹಸಿರೀಕರಣ ಮಾಡಲು ಗಿಡಗಳನ್ನು ನೆಡಲಾಗುತ್ತದೆ. ಮಕ್ಕಳಿಗೆ ಆಟವಾಡಲು ಸಲಕರಣೆಗಳನ್ನು ಒಂದೆಡೆ ಅಳವಡಿಸಲಾಗುತ್ತಿದೆ. ವ್ಯಾಯಾಮ ಮಾಡಲು ಅನುಕೂಲವಾಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ’ ಎಂದು ಕಾರ್ಯಪಾಲಕ ಎಂಜಿನಿಯರ್ ಮಹಾಂತೇಶ್ ವಿವರಿಸಿದರು.
‘ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಸುತ್ತಮುತ್ತಲಿನ ನಿವಾಸಿಗಳು ರಸ್ತೆಯಲ್ಲಿ ಸಂಚರಿಸುವುದಕ್ಕೂ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಹಲವು ಬಾರಿ ಬಿಬಿಎಂಪಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಕೊನೆಗೆ, ಬಡಾವಣೆಯ ನಿವಾಸಿಗಳು ಶಾಸಕ ಆರ್. ಅಶೋಕ ಅವರ ಮೇಲೆ ಹೆಚ್ಚಿನ ಒತ್ತಡ ಹಾಕಿದರು. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೇಲೆ ಒತ್ತುವರಿ ತೆರವಾಗಿದೆ, ಸ್ವಚ್ಛವಾಗಿದೆ. ಶಾಸಕರೇ ಅನುದಾನ ನೀಡಿ, ಉದ್ಯಾನ ಮಾಡುವುದಾಗಿ ಹೇಳಿದ್ದಾರೆ. ಇದು ಒಳ್ಳೆಯ ಕ್ರಮ’ ಎಂದು ಇಸ್ರೊ ಬಡಾವಣೆ ಸ್ಥಳೀಯ ನಿವಾಸಿ ಬಸವರಾಜು ತಿಳಿಸಿದರು.
₹3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
‘ಇಸ್ರೊ ಬಡಾವಣೆಯಲ್ಲಿ ಉದ್ಯಾನಕ್ಕೆಂದೇ ಮೀಸಲಿಟ್ಟಿರುವ ಈ ಪ್ರದೇಶದಲ್ಲಿ ವೃಕ್ಷವನ ಉದ್ಯಾನ ಹಾಗೂ ವ್ಯಾಯಾಮ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಇದು ರಾಜಕಾಲುವೆಯ ಅಕ್ಕಪಕ್ಕವಿರುವ ಪ್ರದೇಶವಾಗಿದ್ದು ಹಿರಿಯ ನಾಗರಿಕರ ವಾಯುವಿಹಾರಕ್ಕೆ ವಿಶೇಷ ರೀತಿಯಲ್ಲಿ ಸೌಲಭ್ಯ ಕಲ್ಪಿಸಲಾಗುತ್ತದೆ. ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಶಾಸಕ ಆರ್. ಅಶೋಕ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಹಾಂತೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.