ADVERTISEMENT

ಎಂಜಿನಿಯರಿಂಗ್‌ ಸೀಟು ಹಂಚಿಕೆ ಅಕ್ರಮ: BMS ಟ್ರಸ್ಟ್‌, ಟ್ರಸ್ಟಿ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 16:06 IST
Last Updated 7 ಏಪ್ರಿಲ್ 2025, 16:06 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಮಯಗಳನ್ನು ಉಲ್ಲಂಘಿಸಿ ನಿಯಮಬಾಹಿರ ಹಾಗೂ ಅಕ್ರಮವಾಗಿ ಎಂಜಿನಿಯರಿಂಗ್‌ ಸೀಟುಗಳನ್ನು ಹಂಚಿಕೆ ಮಾಡಿ ಪ್ರವೇಶ ಕಲ್ಪಿಸಿದ್ದ ಆರೋಪದಡಿ ಬಿಎಂಎಸ್‌ ಎಜುಕೇಷನ್‌ ಟ್ರಸ್ಟ್‌ ಹಾಗೂ ಟ್ರಸ್ಟಿ ರಾಗಿಣಿ ನಾರಾಯಣ್‌ ಅವರ ವಿರುದ್ಧ ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಈ ಸಂಬಂಧ ವಕೀಲ ರಮೇಶ್ ನಾಯಕ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ದಾಖಲಿಸಿದ್ದರು. ಎಸಿಜೆಎಂ 37ನೇ ನ್ಯಾಯಾಲಯದ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬುಲ್‌ ಟೆಂಪಲ್‌ ರಸ್ತೆಯಲ್ಲಿರುವ ಬಿಎಂಎಸ್‌ ಶೈಕ್ಷಣಿಕ ಟ್ರಸ್ಟ್‌ ಅಧೀನದಲ್ಲಿ ಸರ್ಕಾರದ ಅನುದಾನಿತ ಹಾಗೂ ಅನುದಾನೇತರ ನಾಲ್ಕು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‌ನ ರಾಗಿಣಿ ನಾರಾಯಣ ಅವರು ನಿಯಮಗಳ ಉಲ್ಲಂಘನೆ ಮಾಡಿ, ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುತ್ತಿದ್ದಾರೆ. ನಾಲ್ಕು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 2009ರಿಂದ ಕಾಲೇಜು ಮೆರಿಟ್‌ ಪಟ್ಟಿ ಬಗ್ಗೆ ಪ್ರಕಟಣಾ ಫಲಕದಲ್ಲಿ ಪ್ರಕಟಣೆ ಹೊರಡಿಸಿಲ್ಲ ಹಾಗೂ ನಿಯಮಾವಳಿಗಳನ್ನು ಪಾಲನೆ ಮಾಡಿಲ್ಲ. ಅಲ್ಲದೇ ಪ್ರವೇಶ ಶುಲ್ಕ, ಟ್ಯೂಷನ್‌ ಶುಲ್ಕದ ಬಗ್ಗೆ ನಿಯಮಗಳ ಪಾಲನೆ ಮಾಡಿಲ್ಲ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ನಾಲ್ಕು ಕಾಲೇಜುಗಳಲ್ಲಿ 2021–22 ಹಾಗೂ 2022–23ರಲ್ಲಿ ಬಿ.ಇ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಎನ್‌ಆರ್‌ಐ ಹಾಗೂ ಫಾರಿನ್‌ ನ್ಯಾಷನಲ್‌ ಕೋಟಾಗಳಡಿ ಸೀಟುಗಳ ಹಂಚಿಕೆ ನಿಯಮಾವಳಿಗಳ ಉಲ್ಲಂಘನೆ ಮಾಡಲಾಗಿದೆ. ಬಿಎಂಎಸ್‌ ಶೈಕ್ಷಣಿಕ ಟ್ರಸ್ಟ್ 2021–22ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆಯಲ್ಲಿ ಎಐಸಿಟಿಇ ಹಾಗೂ ಯುಜಿಸಿ ನಿಯಮಗಳ ಉಲ್ಲಂಘನೆ ಮಾಡಿ ಸೀಟು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಪ್ರಕಟಣೆಗಳನ್ನೂ ಹೊರಡಿಸಿರುವುದಿಲ್ಲ. ಅಕ್ರಮವಾಗಿ ಸೀಟು ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ಹಣ ಪಡೆದುಕೊಳ್ಳಲಾಗಿದೆ’ ಎಂಬ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.