
ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ ನೀಡುತ್ತಿರುವ ರಾಜ್ಯಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಆರ್. ಮಂಜುನಾಥ್ ಸೇರಿದಂತೆ ಐವರು ಭಾಜನರಾಗಿದ್ದಾರೆ.
ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರದಲ್ಲಿ ವ್ಯಕ್ತಿ– ಸಂಸ್ಥೆಗಳು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ನವೆಂಬರ್ 19ರಂದು ಅರಮನೆ ಮೈದಾನದಲ್ಲಿ ನಡೆಯುವ ‘ಸುವರ್ಣ ಮಹೋತ್ಸವ ಸಮಾರಂಭ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ತಿಳಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ, ಬೆಳಗಾವಿಯ ಉಕ್ಕಡದ ಮಜದೂರು ನವ ನಿರ್ಮಾಣ ಸಂಘಟನೆಯ ಶಿವಾಜಿ ಕಾಗಣಿಕರ, ಮಂಗಳೂರಿನ ಪ್ರೊ. ಜಿ.ಶ್ರೀನಿಕೇತನ್, ಬೆಂಗಳೂರಿನ ಗಣೇಶ್ ಶಂಕರ್, ಆರ್. ಮಂಜುನಾಥ್ ಅವರಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಸುವರ್ಣ ಮಹೋತ್ಸವದ ಅಂಗವಾಗಿ, ಪರಿಸರಕ್ಕೆ ಸಂಬಂಧಿಸಿದ ರೀಲ್ಸ್ ಸ್ಪರ್ಧೆಯಲ್ಲಿ ಧರ್ಮಸ್ಥಳದ ದೀಕ್ಷಿತ್, ಮೈಸೂರಿನ ಆರ್. ನಾಗೇಂದ್ರ, ಪುತ್ತೂರಿನ ಡಾ. ವೈ.ಡಿ. ನಂದೀಶ್ ಅವರು ವಿಜೇತರಾಗಿದ್ದಾರೆ. ಅವರಿಗೆ ಕ್ರಮವಾಗಿ ಪ್ರಥಮ (₹50 ಸಾವಿರ), ದ್ವಿತೀಯ (₹25 ಸಾವಿರ), ತೃತೀಯ (₹10 ಸಾವಿರ) ನಗದು– ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.