ADVERTISEMENT

ಬನ್ನೇರುಘಟ್ಟ: ಆರ್‌ಎಫ್‌ಒ ವರ್ಗಕ್ಕೆ ಆಕ್ರೋಶ

ಆದೇಶ ಹಿಂಪಡೆಯುವಂತೆ ಪರಿಸರ ಕಾರ್ಯಕರ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:32 IST
Last Updated 17 ಜುಲೈ 2019, 19:32 IST

ಬೆಂಗಳೂರು: ಬನ್ನೇರುಘಟ್ಟ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಒ) ವಿ.ಗಣೇಶ್‌ ಅವರನ್ನು ಅವಧಿ ಪೂರ್ಣಗೊಳ್ಳುವ ಮುನ್ನವೇ ದಿಢೀರ್ ವರ್ಗ ಮಾಡಿರುವುದಕ್ಕೆ ಪರಿಸರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶ್‌ ಅವರನ್ನು ಸುಳ್ಯದ ಕರ್ನಾಟಕ ರಬ್ಬರ್‌ ಮಂಡಳಿ ಕಚೇರಿಗೆ ವರ್ಗ ಮಾಡಿ ಆದೇಶ ಮಾಡಲಾಗಿದೆ. ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ಪರಿಸರ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಬನ್ನೇರುಘಟ್ಟ ವಲಯದ ಆರ್‌ಎಫ್‌ಒ ಆಗಿ ಅವರು 2018ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಗಣಿಗಾರಿಕೆ ಚಟುವಟಿಕೆ ನಿಯಂತ್ರಿಸಲು ಕ್ರಮ ವಹಿಸಿದ್ದರು. ವನ್ಯಜೀವಿಗಳು ಅಪಘಾತದಿಂದ ಸಾವಿಗೀಡಾಗುವುದನ್ನು ತಪ್ಪಿಸಲು ಶಿವನಹಳ್ಳಿ– ರಾಗಿಹಳ್ಳಿ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧವನ್ನು ಜಾರಿಗೊಳಿಸಿದ್ದರು. ಮಾನವ– ವನ್ಯಜೀವಿ ಸಂಘರ್ಷ ತಪ್ಪಿಸಲು ರಾಷ್ಟ್ರೀಯ ಉದ್ಯಾನ ಆಸುಪಾಸಿನ ಗ್ರಾಮಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆನೇಕಲ್‌ ವಲಯದ ಆರ್‌ಎಫ್‌ಒ ಅವರುಇತ್ತೀಚೆಗೆ ವರ್ಗವಾದ ಬಳಿಕ ಆ ಹೊಣೆಯನ್ನೂ ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದರು.

ADVERTISEMENT

‘ವನ್ಯಜೀವಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಅರಣ್ಯ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಅಂತಹದ್ದರಲ್ಲಿ ಉತ್ಸಾಹಿ ಅಧಿಕಾರಿಗಳನ್ನು ಈ ರೀತಿ ದಿಢೀರ್‌ ವರ್ಗ ಮಾಡುವುದು ಸರಿಯಲ್ಲ’ ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌ ಅಭಿಪ್ರಾಯಪಟ್ಟರು.

ಬಳ್ಳಾರಿಯ ಅಕ್ರಮ ಗಣಿಗಾರಿಕೆ ತನಿಖೆಗೆ ನಡೆಸಲು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಯು.ವಿ.ಸಿಂಗ್‌ ನೇತೃತ್ವದ ತಂಡದಲ್ಲೂಗಣೇಶ್‌ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ನಗರದ ಮಾಚೋಹಳ್ಳಿ ವಲಯದ ಆರ್‌ಎಫ್‌ಒ ಆಗಿದ್ದ ಸಂದರ್ಭದಲ್ಲಿ 98 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಶ್ರಮಿಸಿದ್ದರು. ಕಾಡುಗೋಡಿ ವಲಯದಲ್ಲೂ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಇಲಾಖೆಯು ಕಾನೂನು ಹೋರಾಟ ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.