
ಬೆಂಗಳೂರು: ರಾಜಾರಾಮ್ ಮೋಹನರಾಯ್ ರಸ್ತೆಯಲ್ಲಿ ಇರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‌ಒ) ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ₹70 ಕೋಟಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗೋಪಿನಾಥ್ ಹಾಗೂ ಸಿಬ್ಬಂದಿ ಲಕ್ಷ್ಮೀ ಬಂಧಿತರು. ಲೆಕ್ಕಾಧಿಕಾರಿ ಬಿ.ಎಲ್.ಜಗದೀಶ್ ಸೇರಿ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸೊಸೈಟಿಯ ಅಧ್ಯಕ್ಷ ಸಿ.ಜೆ.ಮುರುಳೀಧರ್ ಅವರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 31ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ತನಿಖೆ ವೇಳೆ ವಂಚನೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಪೂರಕ ದಾಖಲೆಗಳು ಲಭಿಸಿದ್ದವು. ಆ ಬಳಿಕ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಮನೆಯಲ್ಲಿ ಪರಿಶೀಲನೆ: ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಆರೋಪಿಗಳ ಮನೆಗಳಲ್ಲಿ ಬುಧವಾರ ಮಧ್ಯಾಹ್ನ ಪೊಲೀಸರು ಶೋಧ ನಡೆಸಿದರು.
‘ಆರೋಪಿಗಳಾದ ಗೋಪಿನಾಥ್, ಜಗದೀಶ್, ಲಕ್ಷ್ಮೀ, ಲಿಂಗೇಗೌಡ, ರಾಮಾನುಜ ಅವರಿಗೆ ಸೇರಿದ ಆರ್.ಆರ್.ನಗರ, ಜೆ.ಪಿ.ನಗರ, ಅಂಜನಾಪುರದಲ್ಲಿರುವ ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಏಳು ಐಷಾರಾಮಿ ಕಾರುಗಳು, 12 ದ್ವಿಚಕ್ರ ವಾಹನಗಳು, ಅಂದಾಜು ಒಂದು ಕೆ.ಜಿಯಷ್ಟು ಚಿನ್ನಾಭರಣ ಪತ್ತೆಯಾಗಿದ್ದು ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಆಸ್ತಿಪತ್ರಗಳು, ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಆ ಪತ್ರಗಳನ್ನೂ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
‘ವಂಚನೆಯಿಂದ ಬಂದಿರುವ ಹಣದಲ್ಲೇ ಆರೋಪಿಗಳು ಕಾರು, ಬೈಕ್ ಹಾಗೂ ಆಸ್ತಿ ಖರೀದಿಸಿರುವ ಮಾಹಿತಿಯಿದೆ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
‘ಸೊಸೈಟಿಯ ಲೆಕ್ಕಾಧಿಕಾರಿ ಜಗದೀಶ್‌ಗೆ ಅವರಿಗೆ ತಿಂಗಳಿಗೆ ₹21 ಸಾವಿರ ಸಂಬಳವಿದೆ. ಅವರ ಮನೆಯಲ್ಲಿ ಐಷಾರಾಮಿ ಕಾರುಗಳು ಹಾಗೂ ಅವರ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೆ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಸೊಸೈಟಿಯ ಖಾತೆಯಿಂದಲೇ ಲಕ್ಷ್ಮೀ ಅವರ ಖಾತೆಗೆ ಹಣ ವರ್ಗಾವಣೆ ಆಗಿರುವುದಕ್ಕೆ ಕೆಲವು ದಾಖಲೆಗಳು ಸಿಕ್ಕಿವೆ. ಪರಿಶೀಲನಾ ಕಾರ್ಯ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.
ಆದಾಯ ಮೂಲಕ್ಕೂ ಆರ್ಥಿಕ ಸ್ಥಿತಿಗೂ ಹೊಂದಾಣಿಕೆ ಇಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿದಾಗ ಕೆಲವು ದಾಖಲೆಗಳು ಸಿಕ್ಕಿವೆ. ಆರೋಪಿಗಳ ಈಗಿನ ಆರ್ಥಿಕ ಸ್ಥಿತಿ ಹಾಗೂ ಆದಾಯ ಮೂಲ ಪರಿಶೀಲಿಸಿದಾಗ ಒಂದಕ್ಕೊಂದು ಹೊಂದಾಣಿಕೆ ಆಗುತ್ತಿಲ್ಲ. ಆರೋಪಿತರು ಹೊಂದಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಪಡಿಸಿಕೊಂಡು ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಹಣ ವಂಚನೆಯಾಗಿದೆ. ಸೊಸೈಟಿ ಹಣವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ತನಿಖೆ ಪೂರ್ಣವಾದ ಮೇಲೆ ಗೊತ್ತಾಗಲಿದೆ.ಅಕ್ಷಯ್ ಎಂ. ಹಾಕೆ ಡಿಸಿಪಿ ಕೇಂದ್ರ ವಿಭಾಗ
ಉಳಿದಿದ್ದು ₹3 ಕೋಟಿ ಮಾತ್ರ
ಭವಿಷ್ಯಕ್ಕೆ ಸಹಾಯ ಆಗುತ್ತದೆ ಎಂದು ಉಳಿತಾಯದ ಹಣವನ್ನು ತಾವೇ ಮಾಡಿಕೊಂಡಿದ್ದ ಇಪಿಎಫ್‌ಒ ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ಅನೇಕರು ಹೂಡಿಕೆ ಮಾಡಿದ್ದರು. 61 ವರ್ಷದ ಹಿಂದೆ ಸೊಸೈಟಿ ಅಸ್ತಿತ್ವಕ್ಕೆ ಬಂದಿತ್ತು. ಅವಶ್ಯ ಇರುವ ಸಿಬ್ಬಂದಿಗೆ ಈ ಸೊಸೈಟಿ ಸಾಲ ನೀಡುತ್ತಿತ್ತು. ಇತ್ತೀಚೆಗೆ ಖಾತೆ ಪರಿಶೀಲನೆ ವೇಳೆ ಸೂಸೈಟಿಯ ಖಾತೆಯಲ್ಲಿದ್ದ ₹ 73 ಕೋಟಿ ಪೈಕಿ ₹70 ಕೋಟಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ₹3 ಕೋಟಿ ಮಾತ್ರ ಸೊಸೈಟಿಯ ಖಾತೆಯಲ್ಲಿತ್ತು. ಆತಂಕಗೊಂಡಿದ್ದ 300ಕ್ಕೂ ಹೆಚ್ಚು ಹೂಡಿಕೆದಾರರು ಸೊಸೈಟಿ ಅಧ್ಯಕ್ಷ ಮುರುಳೀಧರ್ ಅವರ ಬಳಿ ಅಳಲು ತೋಡಿಕೊಂಡಿದ್ದರು. ಅಧ್ಯಕ್ಷರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.