ADVERTISEMENT

ಬೆಂಗಳೂರು | EPFO ಸಿಬ್ಬಂದಿಯ ಸೊಸೈಟಿಯಲ್ಲಿ ಹಣ ದುರ್ಬಳಕೆ ಆರೋಪ: ಪ್ರಕರಣ ದಾಖಲು

ಕಬ್ಬನ್‌ಪಾರ್ಕ್‌ ಠಾಣೆಗೆ ದೂರು ನೀಡಿದ ಹೂಡಿಕೆದಾರರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 22:45 IST
Last Updated 31 ಅಕ್ಟೋಬರ್ 2025, 22:45 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ‘ಇಪಿಎಫ್‌ಒ ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ’ಯಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ಸೊಸೈಟಿ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಹೂಡಿಕೆದಾರರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ADVERTISEMENT

ಸೊಸೈಟಿನಲ್ಲಿ ₹73 ಕೋಟಿಯನ್ನು ಹೂಡಿಕೆ ಮಾಡಲಾಗಿತ್ತು. ಆದರೆ, ಕಳೆದ 15 ವರ್ಷದಿಂದ ಸಿಇಒ ಆಗಿರುವ ಗೋಪಿಗೌಡ ಮತ್ತು ಲೆಕ್ಕಾಧಿಕಾರಿ ಜಗದೀಶ್ ಅವರು ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಹೂಡಿಕೆದಾರರು ಕಬ್ಬನ್‌ ಪಾರ್ಕ್ ಠಾಣೆಯ ಎದುರು ಜಮಾಯಿಸಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

‘ದೂರು ಸ್ವೀಕರಿಸಲಾಗಿದ್ದು ಪ್ರಕರಣದ ಮಾಹಿತಿ ಕಲೆಹಾಕಲಾಗುತ್ತಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ಸೊಸೈಟಿನಲ್ಲಿ ಹೂಡಿಕೆ ಮಾಡಿದ್ದೆವು. ಪ್ರತಿ ತಿಂಗಳು ಬಡ್ಡಿ ಖಾತೆಗೆ ಬರುತ್ತಿತ್ತು. ಮೂರು ತಿಂಗಳಿಂದ ಹಣ ಬಂದಿಲ್ಲ. ಪರಿಶೀಲನೆ ನಡೆಸಿದಾಗ ₹70 ಕೋಟಿಯಷ್ಟು ವಂಚನೆ ನಡೆದಿರುವುದು ಗೊತ್ತಾಗಿದೆ ಎಂದು ಹೂಡಿಕೆದಾರರು ದೂರಿದರು.

61 ವರ್ಷದ ಹಿಂದೆ ಇಪಿಎಫ್‌ಒ ಸಿಬ್ಬಂದಿ ‘ಇಪಿಎಫ್ಒ ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ’ ರಚಿಸಿಕೊಂಡಿದ್ದರು. ಉಳಿತಾಯದ ಹಣವನ್ನು ಹೂಡಿಕೆ ಮಾಡುತ್ತಿದ್ದರು. ಅವಶ್ಯಕತೆ ಇರುವ ಸಿಬ್ಬಂದಿಗೆ ಈ ಸೊಸೈಟಿ ಸಾಲ ನೀಡುತ್ತಿತ್ತು.

‘₹3 ಕೋಟಿ ಹಣವನ್ನು‌ ಮಾತ್ರ ಸಾಲವಾಗಿ ಸೊಸೈಟಿ ನೀಡಿದೆ. ಉಳಿದ ಹಣ ಖಾತೆಯಲ್ಲಿ ಇಲ್ಲ ಎಂಬುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ವಂಚನೆ ನಡೆದಿರುವುದು ನಿಜವಾಗಿದ್ದರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಹೂಡಿಕೆದಾರರು ಆರೋಪಿಸಿರುವಂತೆ ಹೆಚ್ಚಿನ ಮೊತ್ತದ ವಂಚನೆ ಆಗಿದ್ದರೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.