ಬೆಂಗಳೂರು: ಕನಿಷ್ಠ ಪಿಂಚಣಿ ಹಾಗೂ ಭತ್ಯೆ, ವೈದ್ಯಕೀಯ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಸೋಮವಾರ ಇಪಿಎಸ್–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
‘ಇಪಿಎಸ್ ಕಾಯ್ದೆ ರಚನೆಯಾಗಿ 30 ವರ್ಷ ಕಳೆದಿವೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಸವಲತ್ತುಗಳನ್ನು ಸೂಕ್ತ ಮಾರ್ಪಾಡು ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಅದರಂತೆ ಕನಿಷ್ಠ ₹7,500 ಪಿಂಚಣಿ ಹಾಗೂ ಭತ್ಯೆ, ವೈದ್ಯಕೀಯ ಸೌಲಭ್ಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಪಿಎಸ್ ವ್ಯಾಪ್ತಿಗೆ ಬಾರದ ಹಲವು ನಿವೃತ್ತ ನೌಕರರಿಗೆ ₹ 5 ಸಾವಿರ ನೀಡಬೇಕು. ಹತ್ತು ವರ್ಷಗಳಲ್ಲಿ ಲಕ್ಷಾಂತರ ಇಪಿಎಸ್ ನೌಕರರು ವಯೋಸಹಜವಾಗಿ ಹಾಗೂ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈವರೆಗೂ ಬೇಡಿಕೆ ಈಡೇರಿಸಿಲ್ಲ’ ಎಂದು ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
‘2022ರ ನವೆಂಬರ್ 4ರಂದು ಸುಪ್ರೀಂ ಕೋರ್ಟ್, ಸುನಿಲ್ ಕುಮಾರ್ ಪ್ರಕರಣದಲ್ಲಿ ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡುವ ಕುರಿತು ತೀರ್ಪು ನೀಡಿದೆ. ಆದರೆ ಅಧಿಕಾರಿಗಳು, ವಿನಾಯ್ತಿ ಸಂಸ್ಥೆಗಳ ನಿವೃತ್ತ ಇಪಿಎಸ್ ನೌಕರರು ಅಧಿಕ ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ತಿಳಿಸಿರುವುದು ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿದೆ. ಹಾಗಾಗಿ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯ ಪಡೆದು, ತೀರ್ಪನ್ನು ಪರಾಮರ್ಶಿಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್‌ಸುಖ್ ಮಾಂಡವೀಯಾ ಹಾಗೂ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ನವದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಆಗಸ್ಟ್ 4ರಿಂದ ಎರಡು ದಿನ ಇಪಿಎಸ್ ನಿವೃತ್ತರ ಆಂದೋಲನ ನಡೆಯಲಿದ್ದು, ಸಾವಿರಾರು ಮಂದಿ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ಜುಲೈ 31ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಸುಬ್ಬಣ್ಣ, ಕಾರ್ಯಾಧ್ಯಕ್ಷ ಶಂಕರ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.