ADVERTISEMENT

ವಿದ್ಯುತ್ ದರ ಏರಿಸಿ ಸುಲಿಗೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 22:45 IST
Last Updated 8 ನವೆಂಬರ್ 2020, 22:45 IST

ಬೆಂಗಳೂರು: ರಾಜ್ಯದಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ವಿದ್ಯುತ್ ದರವನ್ನು ಪ್ರತಿ ಯೂನಿಟ್‍ಗೆ 20 ಪೈಸೆಯಿಂದ 40 ಪೈಸೆಗೆ ಹೆಚ್ಚಿಸಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿರುವುದು ಜನವಿರೋಧಿ ನಡೆ ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದ (ಕಮ್ಯುನಿಸ್ಟ್) ರಾಜ್ಯ ಸಮಿತಿ ವಿರೋಧ ವ್ಯಕ್ತಪಡಿಸಿದೆ.

'ವಿದ್ಯುತ್ ಸರಬರಾಜು ಕಂಪನಿಗಳು ಸಾಮಾನ್ಯ ಬಳಕೆದಾರರನ್ನು ಸುಲಿಗೆ ಮಾಡಲು ಪರವಾನಿಗೆ ನೀಡಿದಂತಾಗಿದೆ. ಈಗಾಗಲೇ ದುಬಾರಿ ವಿದ್ಯುತ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ, ದರ ಏರಿಸುವುದನ್ನು ಕೆಆರ್‌ಇಸಿ ಪರಿಶೀಲಿಸಬೇಕಿತ್ತು' ಎಂದು ಎಸ್‍ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಉಮಾ ಹೇಳಿದರು.

'ಈಗಾಗಲೇ ಕೊರೊನಾದಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ದರ ಏರಿಕೆ ಖಂಡನೀಯ. ಜನರನ್ನು ಮರಳು ಮಾಡುವ ಸರ್ಕಾರದ ಹುನ್ನಾರದ ವಿರುದ್ಧ ಜಾಗೃತರಾಗಬೇಕು. ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಬಾರದು' ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.