ಬೆಂಗಳೂರು: ‘ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರ ಹಿತ ಕಾಯಲು ಕೂಡಲೇ ಕನ್ನಡ ಘಟಕವನ್ನು ಸ್ಥಾಪಿಸಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೂಚಿಸಿದರು.
ಅರಣ್ಯ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು ಶನಿವಾರ ನಡೆಸಿದ ಅವರು, ‘ಕನ್ನಡಿಗರು ತಮ್ಮದೇ ನೆಲದಲ್ಲಿ ಅನಾಥ ಪ್ರಜ್ಞೆಯಿಂದ ನರಳದಿರಲು, ಕನ್ನಡ ಪರ ನಿಲುವುಗಳು ಅಗತ್ಯ. ಕಾಲಕಾಲಕ್ಕೆ ಕನ್ನಡ ಭಾಷೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕನ್ನಡ ಘಟಕಗಳು ಕನ್ನಡಿಗರ ಸಂವೇದನಾಶೀಲತೆಗೆ ಸಹಕರಿಸಲಿವೆ’ ಎಂದರು.
ಮೈಸೂರಿನ ಮೃಗಾಲಯದ ಜಾಲತಾಣವೂ ಸೇರಿದಂತೆ ಇಲಾಖೆಯ ವಿವಿಧ ಕಚೇರಿಗಳ ಜಾಲತಾಣಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿರುವ ಅಂಶವನ್ನು ಉಲ್ಲೇಖಿಸಿದ ಬಿಳಿಮಲೆ, ‘ಜಾಲತಾಣದಲ್ಲಿ ಕನ್ನಡವನ್ನು ಆದ್ಯತೆಯ ಭಾಷೆಯನ್ನಾಗಿ ಬಳಸಬೇಕು. ಕೂಡಲೇ ಈ ಬಗ್ಗೆ ವ್ಯವಸ್ಥೆಯನ್ನು ರೂಪಿಸಬೇಕು’ ಎಂದು ಸೂಚಿಸಿದರು.
ಕನ್ನಡ ಕಡೆಗಣನೆ: ‘ಸಾರ್ವಜನಿಕರೊಂದಿಗೆ ಸ್ಪಂದಿಸುವ ಪತ್ರ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಕನ್ನಡ ಬಳಕೆಗೆ ಮುಂದಾಗಬೇಕು. ಇಲಾಖೆಯ ಜಾಲತಾಣಗಳಲ್ಲಿ ಇರುವ ಆದೇಶಗಳು, ಸುತ್ತೋಲೆಗಳು ಇಂಗ್ಲಿಷ್ ಭಾಷೆಯಲ್ಲಿದ್ದು, ಕೂಡಲೇ ಇದನ್ನು ಸರಿಪಡಿಸಬೇಕು’ ಎಂದು ನಿರ್ದೇಶಿಸಿದರು.
‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಅರಣ್ಯ ಇಲಾಖೆಗೆ ಸೇರಿದ ಕಚೇರಿಗಳು, ಸಾರ್ವಜನಿಕ ಸಂಪರ್ಕ ಸ್ಥಳಗಳು ಸೇರಿ ಕೆಲವೆಡೆ ಇನ್ನೂ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಬಳಕೆಯಾಗಿಲ್ಲ. ಈ ಬಗ್ಗೆ ಕ್ರಮವಹಿಸಿ, ಕನ್ನಡಕ್ಕೆ ಆದ್ಯತೆ ನೀಡಬೇಕು’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಸದಸ್ಯರಾದ ವಿ.ಪಿ. ನಿರಂಜನಾರಾಧ್ಯ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ಒಣ ಕೃಷಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಛಾಯಾ ಎ.ಎಂ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ವನ್ಯಜೀವಿ ಪರಿಪಾಲಕ ಸುಭಾಷ್ ಕೆ. ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಸೀಮಾ ಗರ್ಗ್ ಉಪಸ್ಥಿತರಿದ್ದರು.
‘ಪಾರಿಭಾಷಿಕ ಪದಕೋಶ ರಚಿಸಿ’
‘ತಾಂತ್ರಿಕತೆಯನ್ನು ಆಡಳಿತ ವ್ಯವಸ್ಥೆಯಲ್ಲಿ ಹೊಂದಿರುವ ಕೆಲವು ಇಲಾಖೆಗಳಲ್ಲಿ ಅರಣ್ಯ ಇಲಾಖೆಯು ಒಂದಾಗಿದ್ದು ಸಾರ್ವಜನಿಕರು ಈ ಇಲಾಖೆಯೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಇಲ್ಲಿನ ಪದ ಬಳಕೆಯ ಕುರಿತಂತೆ ಹೆಚ್ಚಿನ ಜಾಗೃತಿ ಹೊಂದಿರಬೇಕಾಗುತ್ತದೆ. ಆಡಳಿತ ವ್ಯವಸ್ಥೆಯ ಭಾಗವಾಗಿರುವ ಅಧೀನ ಅಧಿಕಾರಿ ಸಿಬ್ಬಂದಿಗೂ ಇಲಾಖೆಯ ತಾಂತ್ರಿಕ ಅಂಶಗಳ ಅರಿವು ಅವಶ್ಯವಿರುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಪಾರಿಭಾಷಿಕ ಪದಕೋಶ ರಚನೆಗೆ ಮುಂದಾಗಬೇಕು’ ಎಂದು ಪುರುಷೋತ್ತಮ ಬಿಳಿಮಲೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.