ADVERTISEMENT

11 ಎಕರೆಯಲ್ಲಿ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣ ಘಟಕ ಸ್ಥಾಪನೆ

ಯೋಜನೆ ಜಾರಿಗೆ ನಬಾರ್ಡ್‌ನಿಂದ ₹ 50 ಕೋಟಿ ಸಾಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 21:14 IST
Last Updated 15 ಅಕ್ಟೋಬರ್ 2020, 21:14 IST

ಬೆಂಗಳೂರು: ‘ಸುಸಜ್ಜಿತ ರೇಷ್ಮೆ ಮಾರುಕಟ್ಟೆ ಮತ್ತು ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ರಾಮನಗರ ಮತ್ತು ಚನ್ನಪಟ್ಟಣದ ನಡುವೆ 11 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೆ ನಬಾರ್ಡ್‌ ₹ 50 ಕೋಟಿ ಸಾಲ ನೀಡಲಿದ್ದು, ಸರ್ಕಾರ ಯಾವುದೇ ಹೂಡಿಕೆ ಮಾಡುತ್ತಿಲ್ಲ’ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಮಾರುಕಟ್ಟೆ ಸ್ಥಾಪನೆ ಕುರಿತು ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣಗೌಡರ ಜತೆ ಗುರುವಾರ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ, ‘ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್)‌ ತಯಾರಿಸಲು ಟೆಂಡರ್‌ ಕರೆಯಲಾಗಿದೆ. ಬಳಿಕ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು’ ಎಂದರು.

‘ಈ ಜಾಗದಲ್ಲಿ ರೇಷ್ಮೆಯ ದ್ವಿತಳಿ, ಮಿಶ್ರತಳಿ ಗೂಡು ಖರೀದಿ ಕೇಂದ್ರಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುವುದು. ರೈತರು ರಾತ್ರಿ ವೇಳೆ ತಂಗಲು ವಸತಿ ವ್ಯವಸ್ಥೆ ಜತೆಗೆ ಸುಲಭ ಹಣಕಾಸು ವ್ಯವಹಾರಕ್ಕೆ ಬ್ಯಾಂಕಿಂಗ್‌ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

ದತ್ತಾಂಶ ಸಂಗ್ರಹ: ‘ನೂತನ ಮಾರುಕಟ್ಟೆಗೆ ಬಂದು ರೇಷ್ಮೆ ಗೂಡು ಮಾರಾಟ ಮಾಡುವ ರೈತರ ಹಾಗೂ ಗೂಡಿನ ದತ್ತಾಂಶವನ್ನು ಸಂಗ್ರಹ ಮಾಡಲಾಗುವುದು. ಅತ್ಯುತ್ತಮ ಗೂಡು ಉತ್ಪಾದನೆ ಮಾಡುವ ರೈತರ ಮಾಹಿತಿ ಸಮಗ್ರವಾಗಿ ಸಿಗುವಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಮಾವು ಸಂಸ್ಕರಣಾ ಘಟಕ: ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮದ ಬಳಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಾವು ಸಂಸ್ಕರಣಾ ಘಟಕಕ್ಕೆ ರೇಷ್ಮೆ ಇಲಾಖೆ ತನ್ನ ಅಧೀನದಲ್ಲಿದ್ದ 25 ಎಕರೆ ಭೂಮಿಯನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಲು ಒಪ್ಪಿದೆ. ಮಾತುಕತೆ ವೇಳೆ ಈ ವಿಷಯವನ್ನೂ ಅಂತಿಮಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.