ADVERTISEMENT

ಇಎಸ್‌ವಿಸಿ–2025: ಪಿಇಎಸ್‌ ಕಾಲೇಜಿನ ತಂಡಕ್ಕೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:59 IST
Last Updated 21 ಏಪ್ರಿಲ್ 2025, 15:59 IST
ಇಎಸ್‌ವಿಸಿ 2025 ಸ್ಪರ್ಧೆಯಲ್ಲಿ ತಾವು ತಯಾರಿಸಿದ ವಾಹನದೊಂದಿಗೆ ಭಾಗವಹಿಸಿದ್ದ ಪಿಇಎಸ್‌ ಕಾಲೇಜು ವಿದ್ಯಾರ್ಥಿಗಳ ‘ಹಯಾ ಆಫ್ ರೋಡಿಂಗ್’ ತಂಡ
ಇಎಸ್‌ವಿಸಿ 2025 ಸ್ಪರ್ಧೆಯಲ್ಲಿ ತಾವು ತಯಾರಿಸಿದ ವಾಹನದೊಂದಿಗೆ ಭಾಗವಹಿಸಿದ್ದ ಪಿಇಎಸ್‌ ಕಾಲೇಜು ವಿದ್ಯಾರ್ಥಿಗಳ ‘ಹಯಾ ಆಫ್ ರೋಡಿಂಗ್’ ತಂಡ   

ಬೆಂಗಳೂರು: ಗ್ರೇಟರ್‌ ನೋಯ್ಡಾದ ಗಾಲ್ಗೊಟಿಯಾಸ್ ವಿಶ್ವವಿದ್ಯಾಲಯದಲ್ಲಿ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಎಂಜಿನಿಯರ್ಸ್‌ (ಐಎಸ್ಐಇ) ಆಯೋಜಿಸಿದ್ದ ‘ಎಲೆಕ್ಟ್ರಿಕ್‌ ಸೋಲಾರ್ ವೆಹಿಕಲ್ ಚಾಂಪಿಯನ್‌ಷಿಪ್‌(ಇಎಸ್‌ವಿಸಿ) 2025’ರ ಸ್ಪರ್ಧೆಯಲ್ಲಿ ನಗರದ ಪಿಇಎಸ್‌ ವಿಶ್ವವಿದ್ಯಾಲಯದ ‘ಹಯಾ ಆಫ್ ರೋಡಿಂಗ್’ (ಟಿಎಚ್‌ಒಆರ್‌) ಎಂಜಿನಿಯರ್ ವಿದ್ಯಾರ್ಥಿಗಳ ತಂಡ ‘ದಿ ಫ್ಯೂಚರ್ ಪ್ರಶಸ್ತಿ’ ಮತ್ತು ₹25 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡಿತು.

ಪಿಇಎಸ್‌ ಕಾಲೇಜಿನ ಈ ಎಂಜಿನಿಯರ್‌ಗಳ ತಂಡ ಆಟೋಮೋಟಿವ್ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಮಾತ್ರವಲ್ಲ, ಆಲ್ ಟೆರೈನ್‌ ವೆಹಿಕಲ್ಸ್(ಎಟಿವಿಗಳು)ಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಮಾರ್ಚ್‌ 27ರಿಂದ ಏಪ್ರಿಲ್‌ 2ರವರೆಗೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಎಸ್‌ವಿಸಿ–2025 ಸೌರ ಶಕ್ತಿ ಚಾಲಿತ ಕಾರುಗಳು ಮತ್ತು ಇ–ಬೈಕ್‌ಗಳ ಕೇಂದ್ರಿತ ಸ್ಪರ್ಧೆಯಾಗಿತ್ತು.

ADVERTISEMENT

ಸ್ಪರ್ಧೆಯು ವರ್ಚುವಲ್ ಮತ್ತು ಆನ್-ಸೈಟ್ ಸುತ್ತುಗಳನ್ನು ಒಳಗೊಂಡಿತ್ತು. ಪೂರ್ವಭಾವಿಯಾಗಿ, ಟಿಎಚ್‌ಒಆರ್‌ ತಂಡದ ಸದಸ್ಯರು, ತಮ್ಮ ವಾಹನಕ್ಕೆ ತಗಲುವ ವೆಚ್ಚ ಮತ್ತು ವಿನ್ಯಾಸ ಕುರಿತು ವರದಿಯನ್ನು ಪ್ರಸ್ತುತಪಡಿಸಿದರು. ನಂತರ ಸ್ಪರ್ಧೆಯಲ್ಲಿದ್ದ ಎಲ್ಲ ಹಂತದ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು. ತಂಡ ತಯಾರಿಸಿದ ವಾಹನವು ತಾಂತ್ರಿಕ ತಪಾಸಣೆ, ಬ್ರೇಕ್ ಪರೀಕ್ಷೆ ಮತ್ತು ತೂಕ ಪರಿಶೀಲನೆ ಸೇರಿದಂತೆ ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಯಿತು. ಡೈನಾಮಿಕ್ ಸುತ್ತುಗಳಲ್ಲೂ ತಂಡ ಉತ್ತಮ ಸಾಧನೆ ಮಾಡಿತು.

ಟೀಮ್ ಹಯಾ ಆಫ್ ರೋಡಿಂಗ್‌ ತಂಡ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ಸ್ಪರ್ಧೆಯಲ್ಲಿದ್ದ ದೇಶದ ವಿವಿಧ ವಿಶ್ವವಿದ್ಯಾಲಯಗಳ ಹತ್ತು ತಂಡಗಳೊಂದಿಗೆ ಉತ್ತಮ ಪೈಪೋಟಿ ನೀಡಿ, ಗಮನಾರ್ಹ ಯಶಸ್ಸನ್ನು ಸಾಧಿಸಿತು ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ ಮತ್ತು ಕುಲಪತಿ ಪ್ರೊ. ಜೆ. ಸೂರ್ಯ ಪ್ರಸಾದ್ ಅವರು ತಂಡವನ್ನು ಅಭಿನಂದಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಮತ್ತು ಅಧ್ಯಾಪಕ ಸಲಹೆಗಾರ ಎನ್. ರಾಜೇಶ್ ಮಥಿವನನ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಇಎಸ್‌ವಿಸಿ 2025 ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪಿಇಎಸ್‌ ಕಾಲೇಜು ವಿದ್ಯಾರ್ಥಿಗಳ ‘ಹಯಾ ಆಫ್ ರೋಡಿಂಗ್’ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.