ADVERTISEMENT

ಎತ್ತಿನಹೊಳೆ ಯೋಜನೆ: ಭೂಸ್ವಾಧೀನ ಪ್ರಕ್ರಿಯೆಗೆ ವೇಗ

ತೀವ್ರ ವಿಳಂಬವಾಗಿರುವ ಕಾಮಗಾರಿಯನ್ನು ತ್ವರಿತಗೊಳಿಸಲು ಕ್ರಮ

ಚಿರಂಜೀವಿ ಕುಲಕರ್ಣಿ
Published 15 ಜನವರಿ 2024, 20:33 IST
Last Updated 15 ಜನವರಿ 2024, 20:33 IST
<div class="paragraphs"><p>ಎತ್ತಿನಹೊಳೆ ಯೋಜನೆ</p></div>

ಎತ್ತಿನಹೊಳೆ ಯೋಜನೆ

   

ಬೆಂಗಳೂರು: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಲ್ಲಿ ಆರಂಭಿಕ ಹಂತದ ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿದ ಬೆನ್ನಲ್ಲೇ ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಾಲುವೆ ನಿರ್ಮಾಣಕ್ಕೆ ಅಗತ್ಯವಿರುವ ಜಮೀನುಗಳ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ.

ಮುಂದಿನ ಮುಂಗಾರು ಆರಂಭಕ್ಕೂ ಮುನ್ನವೇ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಜಲ ಸಂಪನ್ಮೂಲ ಇಲಾಖೆ ಹೊಂದಿದೆ. ಅದಕ್ಕೆ ಪೂರಕವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

ADVERTISEMENT

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಕರಾವಳಿಯತ್ತ ಹರಿದು ಸಮುದ್ರ ಸೇರುವ ನದಿಗಳ ನೀರನ್ನು ತಿರುಗಿಸಿ ಬಯಲು ಸೀಮೆಯ ಜಿಲ್ಲೆಗಳಿಗೆ 24.01 ಟಿಎಂಸಿ ಅಡಿ ನೀರನ್ನು ಹರಿಸಲು ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಏಳು ಜಿಲ್ಲೆಗಳ ಕೆರೆಗಳನ್ನು ತುಂಬಿಸುವುದಕ್ಕಾಗಿ ನಾಲ್ಕು ಜಾಕ್‌ವೆಲ್‌ ಮತ್ತು ಬೃಹತ್‌ ಪಂಪಿಂಗ್ ಕೇಂದ್ರಗಳು ಹಾಗೂ 260 ಕಿ.ಮೀ. ಉದ್ದದ ಕಾಲುವೆಗಳನ್ನು ನಿರ್ಮಿಸುವುದು ಈ ಯೋಜನೆಯಲ್ಲಿ ಸೇರಿದೆ. ತೀವ್ರ ವಿಳಂಬವಾಗಿರುವ ಕಾಮಗಾರಿಗಳಿಗೆ ವೇಗ ನೀಡಲು ಜಲ ಸಂಪನ್ಮೂಲ ಇಲಾಖೆ ಮುಂದಾಗಿದೆ.

ಹಾಸನ ಜಿಲ್ಲೆಯ ಕುಮರಿಹಳ್ಳಿ, ರಾಮದೇವರಹಳ್ಳಿ, ಐದಳ್ಳಕಾವಲ್ ಹಾಗೂ ತುಮಕೂರು ಜಿಲ್ಲೆಯ ಕಂಚಿಗನಹಳ್ಳಿ ಯಲ್ಲಾಪುರ ಮತ್ತು ಬೊಮ್ಮನಹಳ್ಳಿ ಗ್ರಾಮಗಳಲ್ಲಿ 71 ಎಕರೆ ಅರಣ್ಯ ಜಮೀನುಗಳನ್ನು ಎತ್ತಿನಹೊಳೆ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್‌ಎಲ್‌) ಪ್ರಸ್ತಾವ ಸಲ್ಲಿಸಿದೆ. ಈ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡರೆ ಕಾಲುವೆಗಳ ನಿರ್ಮಾಣ ಕಾಮಗಾರಿಗಳಿಗೆ ವೇಗ ದೊರೆಯಲಿದೆ.

‘ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ವಿತರಣಾ ಘಟಕಕ್ಕೆ ಹೊಂದಿಕೊಂಡಿರುವ ಎತ್ತರ ಪ್ರದೇಶದಲ್ಲಿ 24 ಕಿ.ಮೀ. ಉದ್ದದ ಕಾಲುವೆ ಜಾಲದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 260 ಕಿ.ಮೀ. ಉದ್ದದ ಕಾಲುವೆಗಳ ನಿರ್ಮಾಣ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯೂ ಮುಗಿದಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬವೇ ಕಾಲುವೆಗಳ ನಿರ್ಮಾಣಕ್ಕೆ ದೊಡ್ಡ ತೊಡಕಾಗಿದೆ’ ಎನ್ನುತ್ತಾರೆ ವಿಜೆಎನ್‌ಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಡಿ. ವೆಂಕಟೇಶ್‌.

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗಳನ್ನು 2023ರ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವು ವಿಜೆಎನ್‌ಎಲ್‌ಗೆ ಗಡುವು ನೀಡಿತ್ತು. ಆದರೆ, 2024ರ ಅಂತ್ಯದ ವೇಳೆಗೆ 100 ಕಿ.ಮೀ. ವರೆಗೆ ನೀರು ಹರಿಸಲು ಸಾಧ್ಯವಾಗಬಹುದು ಎನ್ನುತ್ತಾರೆ ನಿಗಮದ ಹಿರಿಯ ಅಧಿಕಾರಿಯೊಬ್ಬರು.

‘ಹಲವು ಕಡೆಗಳಲ್ಲಿ ಭೂಸ್ವಾಧೀನದಲ್ಲಿನ ಕಾನೂನು ತೊಡಕುಗಳ ಕಾರಣದಿಂದಾಗಿ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮೂರು ಪ್ರಕರಣಗಳಲ್ಲಿ ಜಮೀನುಗಳು ಖಾಸಗಿಯವರ ಸ್ವಾಧೀನದಲ್ಲಿದ್ದರೂ ಅರಣ್ಯ ಇಲಾಖೆ ತನ್ನದೇ ಸ್ವತ್ತು ಎಂದು ಹಕ್ಕು ಪ್ರತಿಪಾದಿಸಿದೆ. ಇಂತಹ ಪ್ರಕರಣಗಳು ಬೇಗ ಇತ್ಯರ್ಥವಾದರೆ ಕಾಮಗಾರಿಯ ವೇಗ ಹೆಚ್ಚುತ್ತದೆ’ ಎನ್ನುತ್ತಾರೆ ವಿಜೆಎನ್‌ಎಲ್‌ ಅಧಿಕಾರಿಗಳು.

ತುಮಕೂರು, ಹಾಸನಕ್ಕೆ ಮುಂದಿನ ವರ್ಷ ನೀರು?

ಅರಸೀಕೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ 33 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಪೂರ್ಣಗೊಳ್ಳಬೇಕಿದೆ. ಮುಂದಕ್ಕೆ ನೀರು ಹರಿಯಬೇಕಾದರೆ ಈ ಭಾಗದ ಕಾಮಗಾರಿ ತ್ವರಿತವಾಗಿ ಮುಗಿಯಬೇಕು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಕಾಮಗಾರಿಗೂ ವೇಗ ದೊರಕುತ್ತದೆ. ತುಮಕೂರು ಮತ್ತು ಹಾಸನ ಜಿಲ್ಲೆಗಳಿಗೆ ಮುಂದಿನ ವರ್ಷದಿಂದ ನೀರು ಹರಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವಿಜೆಎನ್‌ಎಲ್‌ ಅವರು.

ಕಾಡುಮನೆ ಕಿಂಡಿ ಅಣೆಕಟ್ಟೆಯಿಂದ ಕಳೆದ ತಿಂಗಳು ಪ್ರಾಯೋಗಿಕವಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗಿತ್ತು. ಭಾರಿ ಪ್ರಮಾಣದ ನೀರು ಕಾಲುವೆಯಿಂದ ಸೋರಿಕೆಯಾದ ಪರಿಣಾಮ ರಸ್ತೆಗಳು, ಕಾಫಿ ತೋಟಗಳು ಕೊಚ್ಚಿಕೊಂಡು ಹೋಗಿದ್ದವು. ನೀರಿನ ಸೋರಿಕೆ ತಡೆಗೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.