ADVERTISEMENT

ಎತ್ತಿನಹೊಳೆ: ಲೋಕಾಯುಕ್ತಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:44 IST
Last Updated 18 ಅಕ್ಟೋಬರ್ 2019, 19:44 IST

ಬೆಂಗಳೂರು: ಎತ್ತಿನ ಹೊಳೆ ಯೋಜನೆ ಕಾಮಗಾರಿ ಮೊತ್ತವನ್ನು ₹12,000 ಕೋಟಿಯಿಂದ ₹25,000 ಕೋಟಿಗೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ವಿನಯ್‌ ಆರ್‌.ವಿ ಎಂಬುವವರು ದೂರು ನೀಡಿದ್ದಾರೆ.

2018–19 ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಲಸಂಪನ್ಮೂಲ ಮಂಡಳಿ ಸಭೆಯಲ್ಲಿ ಕಾಮಗಾರಿ ಮೊತ್ತ ಏರಿಕೆಗೆ ಅನುಮತಿ ನೀಡಲಾಗಿದ್ದು, ಅರಸೀಕೆರೆ, ತುಮಕೂರು ಮತ್ತು ಇತರ ಕಡೆಗಳಲ್ಲಿ ನಡೆದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದ್ದಾರೆ.

ಆಗ ವಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಜೈ.ಪ್ರಕಾಶ್‌ ಅವರು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಹುದ್ದೆಯ ಪ್ರಭಾರದಲ್ಲಿದ್ದರು. ಕಾಮಗಾರಿ ಹಂಚಿಕೆಯಲ್ಲಿ ಅನುಭವವಿಲ್ಲದ ಗುತ್ತಿಗೆದಾರರಿಗೆ ಹಂಚಿಕೆ ಮಾಡಲಾಗಿದೆ. ವಿವೇಚನೆ ಇಲ್ಲದೆ, ಕಾಮಗಾರಿ ಮೊತ್ತವನ್ನು ಏರಿಕೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದಿದ್ದಾರೆ.

ADVERTISEMENT

2018 ರ ಜೂನ್‌ನಿಂದ 2019 ರ ಜುಲೈವರೆಗೆ ಜಲಸಂಪನ್ಮೂಲ ಇಲಾಖೆಗೆ ಸೇರಿದ ಕೆಬಿಜೆಎನ್‌ಎಲ್‌, ಕೆಎನ್‌ಎನ್‌ಎಲ್‌, ವಿಜೆಎನ್‌ಎಲ್‌ ಇತ್ಯಾದಿ ನಿಗಮಗಳ ಇಎಫ್‌ಐಗಳನ್ನು ಕನಿಷ್ಠ ₹3,000 ಕೋಟಿಯಿಂದ ₹4,000 ಕೋಟಿಗಳಿಗೆ ಅನುಮೋದಿಸಿ ಹಿಂದಿನ ಸರ್ಕಾರದ ಸಚಿವರೊಬ್ಬರಿಗೆ ಲೋಕಸಭಾ ಚುನಾವಣೆಗಾಗಿ ₹1,000 ದಿಂದ ₹1,500 ಕೋಟಿ ಚುನಾವಣೆ ನಿಧಿಯನ್ನು ಗುತ್ತಿಗೆದಾರರು ಮತ್ತು ಎಂಜಿನಿಯರುಗಳಿಂದ ಸಂಗ್ರಹಣೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ವಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಜೈ.ಪ್ರಕಾಶ್ 2018 ರ ಜೂನ್‌ನಿಂದ 2019 ರ ಜುಲೈವರೆಗಿನ ಅವಧಿಯಲ್ಲಿ ಕೆಬಿಜೆಎನ್‌ಎಲ್‌, ಕೆಎನ್‌ಎನ್‌ಎಲ್‌, ವಿಜೆಎನ್‌ಎಲ್‌ ಮತ್ತು ಸಿಎನ್‌ಎನ್‌ಎಲ್‌ ತಾಂತ್ರಿಕ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ನಾಲ್ಕೂ ನಿಗಮಗಳ ಕಾಮಗಾರಿಗಳ ಮೂಲ ಅಂದಾಜಿಗೆ ₹5,000 ಕೋಟಿಗಳ ಹೆಚ್ಚುವರಿ ಇಎಫ್‌ಐ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.