ADVERTISEMENT

ಅನಧಿಕೃತ ವಾಸ ತೆರವು: 17 ಕುಟುಂಬ ಬೀದಿಗೆ

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 18:40 IST
Last Updated 11 ಫೆಬ್ರುವರಿ 2021, 18:40 IST
ಮನೆಯಿಂದ ಹೊರ ಹಾಕಿರುವ ವಸ್ತುಗಳು
ಮನೆಯಿಂದ ಹೊರ ಹಾಕಿರುವ ವಸ್ತುಗಳು   

ಬೆಂಗಳೂರು: ಅಗ್ರಹಾರ ದಾಸರಹಳ್ಳಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳಲ್ಲಿ ಅನಧಿಕೃತವಾಗಿ ವಾಸವಿದ್ದಾರೆ ಎಂಬ ಆರೋಪದಲ್ಲಿ 17 ಕುಟುಂಬಗಳನ್ನು ಅಧಿಕಾರಿಗಳುಪೊಲೀಸರ ಮೂಲಕ ಗುರುವಾರ ಹೊರ ಹಾಕಿಸಿದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ 30 ಮನೆಗಳಲ್ಲಿ 17 ಮನೆಗಳ ನಿವಾಸಿಗಳಿಗೆ ಬುಧವಾರ ನೋಟಿಸ್ ನೀಡಲಾಗಿತ್ತು. ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರುಗಳು ಇಲ್ಲದ ಕಾರಣ ಕೂಡಲೇ ಮನೆಗಳನ್ನು ಖಾಲಿ ಮಾಡಬೇಕು ಎಂದು ತಿಳಿಸಲಾಗಿತ್ತು.

ಗುರುವಾರ ಪೊಲೀಸರೊಂದಿಗೆ ಬಂದ ಅಧಿಕಾರಿಗಳು ಮನೆಗಳನ್ನು ಖಾಲಿ ಮಾಡುವಂತೆ ತಿಳಿಸಿದರು. ಏಕಾಏಕಿ ಮನೆ ಖಾಲಿ ಮಾಡಲು ಸಾಧ್ಯವಿಲ್ಲ ಎಂದು ನಿವಾಸಿಗಳು ಹೇಳಿದರು. ಈ ಸಂದರ್ಭದಲ್ಲಿ ನಿವಾಸಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವುದಿಲ್ಲ ಎಂದು ನಿವಾಸಿಗಳು ಪಟ್ಟು ಹಿಡಿದರು. ಆದರೂ, ಬಿಡದ ಅಧಿಕಾರಿಗಳು ಪೊಲೀಸರ ಮೂಲಕ ನಿವಾಸಿಗಳನ್ನು ಹೊರ ದಬ್ಬಿದರು.

ADVERTISEMENT

ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಅವರನ್ನು ಪೊಲೀಸರು ಎಳೆದು ಹೊರಕ್ಕೆ ತಂದರು. ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಮತ್ತೊಮ್ಮೆ ಯತ್ನಿಸಿದರು. ಆಗ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು.

‘17 ಮನೆಯವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದ್ದ ಕಾರಣಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ನಮ್ಮನ್ನು ಮನೆಯಿಂದ ಹೊರ ಹಾಕಿಸುತ್ತಿದ್ದಾರೆ. ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ಅಧಿಕಾರಿಗಳು ಹೊರ ಹಾಕುತ್ತಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದರು.

‘ಬದಲಿ ವ್ಯವಸ್ಥೆಯನ್ನೂ ಮಾಡದೆ ಮನೆಯಿಂದ ಹೊರದಬ್ಬುವ ಮೂಲಕ ಮಕ್ಕಳೊಂದಿಗೆ ನಮ್ಮನ್ನು ಬೀದಿಗೆ ತಳ್ಳಲಾಗಿದೆ. ಮನುಷ್ಯತ್ವ ಇಲ್ಲದೆ ಅಧಿಕಾರಿಗಳು ನಡೆದುಕೊಂಡಿದ್ದಾರೆ’ ಎಂದು ಕಣ್ಣೀರಿಟ್ಟರು.

‘ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದ್ದರೂ ಮನೆ ಇದ್ದವರಿಗೇ ಮಂಜೂರು ಮಾಡಿ ಮನೆ ಇಲ್ಲದ ನಮಗೆ ಅನ್ಯಾಯ ಮಾಡಲಾಗಿದೆ. ನೋಟಿಸ್ ನೀಡಿದ ಬಳಿಕ 45 ದಿನಗಳ ಕಾಲಾವಕಾಶ ಇರುತ್ತದೆ. ಆದರೆ, ನೋಟಿಸ್ ನೀಡಿದ ಒಂದೇ ದಿನದಲ್ಲಿ ನಮ್ಮನ್ನು ಹೊರ ಹಾಕಿದ್ದಾರೆ’ ಎಂದು ಮನೆ ಕಳೆದುಕೊಂಡ ಸರೋಜಮ್ಮೆ ಆರೋಪಿಸಿದರು.

ನ್ಯಾಯಾಲಯದ ನಿರ್ದೇಶನದಂತೆ ಕ್ರಮ: ಸೋಮಣ್ಣ

ನ್ಯಾಯಾಲಯದ ನಿರ್ದೇಶನದಂತೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ನ್ಯಾಯಸಮ್ಮತ ಕ್ರಮ ಕೈಗೊಂಡಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದರು.

‘ಇದೇ ಜಾಗದಲ್ಲಿದ್ದ ನಿವಾಸಿಗಳಿಗಾಗಿ 60 ಮನೆಗಳನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಯಾರಿಗಾಗಿ ಮನೆ ಕಟ್ಟಿಸಲಾಗಿತ್ತೋ, ಅವರಿಗೆ ಅನ್ಯಾಯ ಮಾಡಿ ಬೇರೆಯವರು ಮನೆಗಳಲ್ಲಿ ಸೇರಿಕೊಂಡಿದ್ದರು’ ಎಂದು ತಿಳಿಸಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಜನವರಿಯಲ್ಲಿ ತಡೆಯಾಜ್ಞೆ ತೆರವುಗೊಳಿಸಿರುವ ನ್ಯಾಯಾಲಯ, ಅನಧಿಕೃತವಾಗಿ ವಾಸವಿದ್ದರೆ ತೆರವುಗೊಳಿಸಿ ನಿಜವಾದ ಫಲಾನುಭವಿಗಳಿಗೆ ಮನೆ ನೀಡಲು ನಿರ್ದೇಶನ ನೀಡಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಅಥವಾ ಬಿಜೆಪಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಮನೆ ಇದ್ದವರೇ ಬಡವರಿಗಾಗಿ ಕಟ್ಟಿರುವ ಮನೆಗಳಿಗೆ ಬಂದು ಸೇರಿಕೊಂಡಿದ್ದಾರೆ. ಅವರನ್ನು ಹೊರಕ್ಕೆ ಕಳುಹಿಸಿ 10 ವರ್ಷಗಳಿಂದ ರಸ್ತೆ ಬದಿಯಲ್ಲಿ ಈಗಲೂ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಅಧಿಕಾರಿಗಳು ನ್ಯಾಯ ಕೊಡಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಮನೆ ಎದುರೇ ಕುಳಿತ ನಿವಾಸಿಗಳು

ಪೊಲೀಸರು ಮನೆಯಿಂದ ಹೊರ ಹಾಕಿದ್ದರೂ, ರಾತ್ರಿಯಾದರೂ ಮಕ್ಕಳೊಂದಿಗೆ ಮನೆಯ ಎದುರೇ ಸಂತ್ರಸ್ತರು ಕುಳಿತಿದ್ದರು.

ಮನೆ ಕಾರ್ಯಾಚರಣೆ ಮಾಡಿಸದಂತೆ ಕೋರಿ 17 ನಿವಾಸಿಗಳ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೂ, ಸಂತ್ರಸ್ತರಿಗೆ ಮನೆಯಲ್ಲಿರಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ’ ಎಂದು ವಕೀಲ ಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.