ಪೀಣ್ಯ ದಾಸರಹಳ್ಳಿ: 'ಬೆಂಗಳೂರು ಕಾಂಕ್ರಿಟ್ ನಗರವಾಗುತ್ತಿದ್ದು, ಪರಿಸರ ಸಂರಕ್ಷಣೆಗೆ ಎಚ್ಚರವಹಿಸದಿದ್ದರೆ, ಬೆನ್ನಿಗೆ ಆಕ್ಸಿಜನ್ ಕಿಟ್ ಕಟ್ಟಿಕೊಂಡು ಓಡಾಡುವ ಸ್ಥಿತಿ ಬರಲಿದೆ’ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಎಚ್ಚರಿಸಿದರು.
ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂ.ಎಸ್. ಕಾಲೇಜು, ಜಯ ಕರ್ನಾಟಕ ರಾಜ್ಯ ಸಂಘಟನೆ, ಲೈನ್ಸ್ ಕ್ಲಬ್ ವೀರ ಹೊಯ್ಸಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ನಗರದ ಪ್ರತಿಯೊಬ್ಬ ನಾಗರಿಕ ಮನೆ ಬಳಿ ಒಂದು ಗಿಡವನ್ನಾದರೂ ನೆಟ್ಟಿ ಬೆಳೆಸಲು ಯತ್ನಿಸಬೇಕು’ ಎಂದು ಸಲಹೆ ಮಾಡಿದರು.
ಕಾಲೇಜಿನ ಚೇರ್ಮನ್ ವಾಲ್ಟರ್ ಜೈ ಸಿಂಗ್ ಮಾತನಾಡಿ, 'ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ವಾಯುಮಾಲಿನ್ಯವೂ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹೆಚ್ಚು ಹೆಚ್ಚು ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ' ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಧುಸೂದನ್, ಎನ್.ಜಿ.ಗುರುಪ್ರಸಾದ್, ಕಾಲೇಜಿನ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
ಕಾರ್ಯಕ್ರಮಕ್ಕೂ ಮುನ್ನ ದಾಸರಹಳ್ಳಿಯ ಎಂಟನೇ ಮೈಲಿ ವೃತ್ತದಿಂದ ಸಪ್ತಗಿರಿ ಕಾಲೇಜ್ ಹಿಂಭಾಗದಲ್ಲಿರುವ ಎಜಿಬಿ ಬಡಾವಣೆವರೆಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಸರದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಭಿತ್ತಿಪತ್ರ ಹಿಡಿದು ಜಾಥಾ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.