ADVERTISEMENT

ಜಯನಗರದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು; ಪ್ರತಿಭಟನೆ

ಜಯನಗರದಲ್ಲಿ ದಿಢೀರ್ ವ್ಯಾಪಾರ: ಬಿಗುವಿನ ವಾತಾವರಣ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 21:14 IST
Last Updated 12 ಜನವರಿ 2024, 21:14 IST
ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದರಿಂದ ವ್ಯಾಪಾರಿಗಳು ಶುಕ್ರವಾರ ರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು
ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದರಿಂದ ವ್ಯಾಪಾರಿಗಳು ಶುಕ್ರವಾರ ರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಜಯನಗರ 4ನೇ ಬ್ಲಾಕ್‌ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ವ್ಯಾಪಾರ ಆರಂಭಿಸಿದ್ದರಿಂದ ಅವರನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.

ಜಯನಗರದಲ್ಲಿ ಈ ಹಿಂದೆ ತೆರವುಗೊಳಿಸಿದ್ದ ಸ್ಥಳದಲ್ಲೇ ಬೀದಿ ಬದಿ ವ್ಯಾಪಾರಿಗಳು ಶುಕ್ರವಾರ ವಹಿವಾಟು ಆರಂಭಿಸಿದ್ದರು. ಇವರನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಮುಂದಾದಾಗ, ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಶುಕ್ರವಾರ ರಾತ್ರಿಯವರೆಗೂ ಬೀದಿಬದಿ ವ್ಯಾಪಾರಿಗಳು ಹಾಗೂ ಬಿಬಿಎಂಪಿ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ‘ಹಬ್ಬದ ಸಮಯವಾದ್ದರಿಂದ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದು ಬೀದಿ ಬದಿ ವ್ಯಾಪಾರಿಗಳು ಮನವಿ ಮಾಡಿಕೊಂಡರು.

ADVERTISEMENT

‘ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಅಡಚಣೆಯಾಗುವುದರಿಂದ ವ್ಯಾಪಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಬೀದಿಬದಿ ವ್ಯಾಪಾರಿಗಳ ಸಮಿತಿ ಸಭೆಯನ್ನು ವಲಯದ ಜಂಟಿ ಆಯುಕ್ತರ ನೇತೃತ್ವದಲ್ಲಿ ಜ.18ರಂದು ಕರೆಯಲಾಗಿದೆ. ಅಲ್ಲಿ ಸಮಾಲೋಚನೆ ನಡೆಸಿ, ಯಾವ ರಸ್ತೆಯಲ್ಲಿ ವ್ಯಾಪಾರ ನಡೆಸಬೇಕು ಎಂಬುದನ್ನು ಅಂತಿಮಗೊಳಿಸಿಕೊಳ್ಳಿ ಎಂದು ಬೀದಿ ಬದಿ ವ್ಯಾಪಾರಿಗಳಿಗೆ ತಿಳಿಸಿದ್ದೇವೆ’ ಎಂದು ದಕ್ಷಿಣ ವಲಯ ಮುಖ್ಯ ಎಂಜಿನಿಯರ್‌ ರಾಜೇಶ್‌ ತಿಳಿಸಿದರು.

‘ಸಮಿತಿ ಸಭೆಯನ್ನು ನಡೆಸಿ, ನಮಗೆ ಜಾಗ ಗುರುತಿಸಿಕೊಡಿ ಎಂದು ಹಲವು ತಿಂಗಳಿಂದ ಮನವಿ ಮಾಡಿಕೊಂಡರೂ ಆ ಪ್ರಕ್ರಿಯೆ ನಡೆಸಿಲ್ಲ. ನಾವೆಲ್ಲ ಪರವಾನಗಿ ಪಡೆದ ವ್ಯಾಪಾರಿಗಳು. ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲೇ ನಮಗೆ ಅವಕಾಶ ನೀಡದಿದ್ದರೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಹೀಗಾಗಿ, ತೆರವು ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರೂ ಪೊಲೀಸ ರೊಂದಿಗೆ ಬಂದು ನಮ್ಮ ಸಾಮಗ್ರಿಗಳನ್ನು ತೆಗೆಯುತ್ತಿದ್ದಾರೆ’ ಎಂದು ನೂರಾರು ವ್ಯಾಪಾರಿಗಳು ದೂರಿದರು.

‘20–30 ವರ್ಷದಿಂದ ಈ ಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಒಂದೇ ಬಾರಿ ಅವರನ್ನು ತೆರವುಗೊಳಿಸಿದರೆ ಅವರು ಎಲ್ಲಿಗೆ ಹೋಗಬೇಕು? ಹಬ್ಬದ ಸಂದರ್ಭ ಅವಕಾಶ ಮಾಡಿಕೊಡಿ. ಮುಂದಿನ ವಾರ ಸಭೆ ನಡೆಸಿ ಅವರಿಗೆ ‘ಹಾಕರ್‌ ಝೋನ್‌’ ನಿರ್ಮಿಸಿಕೊಡಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಬಿಬಿಎಂಪಿ ಮಾಜಿ ಸದಸ್ಯ ಎನ್‌. ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.