ADVERTISEMENT

ನಿವೃತ್ತ ಪೌರಾಯುಕ್ತರ ಪಿಂಚಣಿಗೆ ಕತ್ತರಿ

ಸರ್ಕಾರಿ ಕಾಲೇಜು ಜಾಗದಲ್ಲಿ ವಾಣಿಜ್ಯ ಮಳಿಗೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:17 IST
Last Updated 7 ನವೆಂಬರ್ 2019, 20:17 IST

ಬೆಂಗಳೂರು: ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಅವಕಾಶ ನೀಡಿದ ತುಮಕೂರು ಪುರಸಭೆ ಹಿಂದಿನ ಆಯುಕ್ತ ಎಂ. ರಾಮಚಂದ್ರ ಅವರ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ 5ರಷ್ಟು ಕಡಿತ ಮಾಡಲು ಸರ್ಕಾರ ಆದೇಶಿಸಿದೆ.

ರಾಮಚಂದ್ರ ಅವರ ನಿವೃತ್ತಿ ವೇತನ ಕಡಿತವು ಅದು ಆರಂಭವಾದಾಗಿನಿಂದ ಎರಡು ವರ್ಷ ಜಾರಿಯಲ್ಲಿರುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಒಪ್ಪಿಗೆ ನೀಡಿದ ಪ್ರಕರಣ ಕುರಿತು ಲೋಕಾಯುಕ್ತ ವಿಚಾರಣೆ ನಡೆಸಿತ್ತು.

ರಾಮಚಂದ್ರ ಅವರ ಕ್ರಮ ಕರ್ನಾಟಕ ಉದ್ಯಾನ, ಆಟದ ಮೈದಾನ ಹಾಗೂ ಖಾಲಿ ಜಾಗಗಳ (ಮೀಸಲು ಮತ್ತು ನಿಯಂತ್ರಣ) ಕಾಯ್ದೆ ಮತ್ತು ನಾಗರಿಕ ಸೇವಾ ನಿಯಮ ಉಲ್ಲಂಘನೆ ಆಗಿದೆ ಎಂದು ಲೋಕಾಯುಕ್ತ ಸಂಸ್ಥೆ ಅಭಿಪ್ರಾಯಪಟ್ಟು ಇಲಾಖಾ ವಿಚಾರಣೆಗೆ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರದ ಅನುಮತಿ ದೊರೆತ ಬಳಿಕ ವಿಚಾರಣೆ ನಡೆದಿತ್ತು.

ADVERTISEMENT

ಕಳೆದ ವರ್ಷದ ಮೇ 25ರಂದು ಸರ್ಕಾರಕ್ಕೆ ವರದಿ ಕಳುಹಿಸಿದ್ದ ಲೋಕಾಯುಕ್ತ ರಾಮಚಂದ್ರ ಅವರ ವಿರುದ್ಧದ ಆರೋ‍‍‍‍ಪ ಸಾಬೀತಾಗಿದ್ದು, ‍ಪಿಂಚಣಿಯಲ್ಲಿ ಶೇ 5ರಷ್ಟನ್ನು ತಡೆಹಿಡಿಯುವಂತೆ ಸೂಚಿಸಿದ್ದರು. ಆನಂತರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಕ್ಷಮ ‍‍ಪ್ರಾಧಿಕಾರ ದಂಡನೆ ಪೂರ್ವ ನೋಟಿಸ್‌ ಜಾರಿ ಮಾಡಿತ್ತು. ತಪ್ಪಿತಸ್ಥ ನಿವೃತ್ತ ಅಧಿಕಾರಿ ಆರೋಪ ಅಲ್ಲಗಳೆದರೂ ಸರ್ಮರ್ಥಿಸಿಕೊಳ್ಳಲು ವಿಫಲರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.