ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಚಿಕ್ಕ ನಿವೇಶನಗಳಲ್ಲಿ ನಿರ್ಮಿಸುವ ವಸತಿ ಕಟ್ಟಡದ ಸೆಟ್‌ಬ್ಯಾಕ್ ನಿಯಮಗಳಿಗೆ ವಿನಾಯಿತಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚಿಂತಿಸಿದೆ.
20 ಅಡಿ x 30 ಅಡಿಯಿಂದ 30 ಅಡಿ x 40 ಅಡಿ ನಿವೇಶನಗಳಲ್ಲಿ, ನೆಲ ಮತ್ತು ಎರಡು ಅಂತಸ್ತು ವಸತಿ ಕಟ್ಟಡ ನಿರ್ಮಿಸಿದರೆ ಸುತ್ತಲೂ ಬಿಡಬೇಕಾದ ಜಾಗದ (ಸೆಟ್‌ಬ್ಯಾಕ್) ವಿಸ್ತೀರ್ಣ ಕಡಿಮೆಯಾಗಲಿದೆ.
ರಸ್ತೆ ಬದಿಗೆ 20 ಅಡಿ ಅಗಲ ಹೊಂದಿರುವ ನಿವೇಶನದಲ್ಲಿ ವಸತಿ ಕಟ್ಟಡ ನಿರ್ಮಿಸುವಾಗ ಮುಂಭಾಗದಲ್ಲಿ ಮಾತ್ರ ಮೂರು ಅಡಿ ಜಾಗ (ಸೆಟ್‌ಬ್ಯಾಕ್) ಬಿಡಬೇಕು. 30 ಅಡಿವರೆಗಿನ ನಿವೇಶನದಲ್ಲಿ ಕಟ್ಟಡದ ಹಿಂಬದಿಯಲ್ಲಿ ಜಾಗ ಬಿಡಬೇಕಾದ ಅಗತ್ಯವಿಲ್ಲ. 30 ಅಡಿಯಿಂದ 40 ಅಡಿವರೆಗಿನ ನಿವೇಶನದಲ್ಲಿ ಕಟ್ಟಡ ನಿರ್ಮಿಸುವಾಗ ಅದರ ಅಳತೆಗೆ ಅನುಗುಣವಾಗಿ ಸುತ್ತಲೂ ಜಾಗ ಬಿಡಬೇಕಾಗುತ್ತದೆ. ಈ ಕುರಿತಂತೆ ವಲಯ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವ ಸಲ್ಲಿಸಿದೆ.
ಪ್ರಸ್ತುತ ಚಾಲ್ತಿಯಿರುವ ಸೆಟ್‌ಬ್ಯಾಕ್ ನಿಯಮಗಳ ಪ್ರಕಾರ, 20 ಅಡಿ x 30 ಅಡಿ ನಿವೇಶನಗಳಲ್ಲಿ ಕಟ್ಟಡದ ಸುತ್ತಲೂ ಒಂದು ಮೀಟರ್ (3.28 ಅಡಿ) ಜಾಗ ಬಿಡಬೇಕು. 30 ಅಡಿ x 40 ಅಡಿ ನಿವೇಶನಗಳಲ್ಲಿ ಸುತ್ತಲೂ 1.50 ಮೀಟರ್ (5 ಅಡಿ) ಸೆಟ್‌ಬ್ಯಾಕ್ ಇರಬೇಕು.
‘ನಾವು ಎಷ್ಟೇ ಪ್ರಯತ್ನಪಟ್ಟರೂ ಚಿಕ್ಕ ನಿವೇಶನಗಳಲ್ಲಿ ಸೆಟ್‌ಬ್ಯಾಕ್ ಉಲ್ಲಂಘನೆಯಾಗುತ್ತಲೇ ಇದೆ. ಬಹುತೇಕ ಬಡವರ್ಗದ ಜನರೇ ಇಂತಹ ನಿವೇಶನಗಳಲ್ಲಿ ಮನೆ ನಿರ್ಮಿಸಿರುತ್ತಾರೆ. ಉಲ್ಲಂಘನೆಗೆ ಕ್ರಮ ಕೈಗೊಳ್ಳಲು ನೋಟಿಸ್ ನೀಡಿದಾಗ ಹಲವು ರೀತಿಯ ಮನವಿ ಮಾಡುತ್ತಾರೆ, ಒತ್ತಡವೂ ಬರುತ್ತದೆ. ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಸಾವಿರಾರು ಮನೆಗಳ ಸುತ್ತ ಸೆಟ್‌ಬ್ಯಾಕ್ ಇಲ್ಲ. ಹೀಗಾಗಿ, ಚಿಕ್ಕ ನಿವೇಶನಗಳ ವಸತಿ ಕಟ್ಟಡಗಳಿಗೆ ವಿನಾಯಿತಿ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ನಗರದಲ್ದಿ ನಕ್ಷೆ, ಸೆಟ್‌ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಾಣವಾಗಲು ಬಿಡದಂತೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.
30 ಚದರ ಮೀಟರ್ ನಿವೇಶನಕ್ಕೆ ಅನುಮತಿ ಇಲ್ಲ!
ನಗರದಲ್ಲಿ 30 ಚದರ ಮೀಟರ್‌ಗಿಂತ (323 ಚದರಡಿ) ಕಡಿಮೆ ವಿಸ್ತೀರ್ಣದಲ್ಲಿರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ, ಕಟ್ಟಡ ಉಪವಿಧಿಗಳಲ್ಲಿ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವದಲ್ಲಿ ಬಿಬಿಎಂಪಿ ಮನವಿ ಮಾಡಿಕೊಂಡಿದೆ. ಇಂತಹ ನಿವೇಶನಗಳಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡದಂತೆ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡಲೂ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.