ಸಾಂದರ್ಭಿಕ ಚಿತ್ರ
ಬೆಂಗಳೂರು: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಭಗವತಿ ಬಡಾವಣೆಯ ಆರನೇ ಕ್ರಾಸ್‌ನ ರಾಹುಲ್ ಹೋಮ್ ಅಪ್ಲಯನ್ಸಸ್ ಮಳಿಗೆಯಲ್ಲಿ ಗ್ಯಾಸ್ ಸಿಲಿಂಡರ್‌ನಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಮಾದರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಮಳಿಗೆಯ ಮಾಲೀಕ ಸುರೇಶ್ ದಾಸ್ ಅವರ ಮಗ ರಾಹುಲ್ ಅವರು ಗಾಯಗೊಂಡಿದ್ದಾರೆ.
ರಾಹುಲ್ ಅವರ ಎರಡೂ ಕೈ, ಭುಜ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
‘ಸ್ಫೋಟದ ರಭಸಕ್ಕೆ ಅಂಗಡಿಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಕ್ಕಪಕ್ಕದ ಅಂಗಡಿಗಳ ಬಾಗಿಲು, ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿದೆ. ಮಳಿಗೆಯ ಬಾಗಿಲು ಕಿತ್ತುಬಂದು ಎದುರು ಮನೆಯ ಗೋಡೆಗೆ ಅಪ್ಪಳಿಸಿತ್ತು’ ಎಂದು ಪೊಲೀಸರು ತಿಳಿಸಿದರು.
‘ಮಳಿಗೆಯಲ್ಲಿಟ್ಟಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ. ಸ್ಫೋಟಕ್ಕೆ ಇನ್ನೂ ನಿಖರವಾದ ಕಾರಣ ಗೊತ್ತಾಗಿಲ್ಲ. ನಿರ್ಲಕ್ಷ್ಯ ತೋರಿದ ಆರೋಪದ ಅಡಿ ಮಾಲೀಕ ಸುರೇಶ್ ದಾಸ್ ಹಾಗೂ ರಾಹುಲ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಬೆಚ್ಚಿಬಿದ್ದ ಜನರು:
ಗುರುವಾರ ರಾತ್ರಿ 10.54ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಸ್ಫೋಟವಾದ ಕೂಡಲೇ ಜೋರು ಶಬ್ದ ಕೇಳಿಸಿತ್ತು. ಪಾದಚಾರಿಗಳು ಹಾಗೂ ಅಕ್ಕಪಕ್ಕದ ಅಂಗಡಿಗಳ ಮಾಲೀಕರು ಶಬ್ದ ಕೇಳಿ ಓಡಿ ಹೋಗಿದ್ದರು. ತಕ್ಷಣವೇ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.