ADVERTISEMENT

ರಾಜ್ಯದ 5 ಕಡೆ ರಫ್ತು ಉದ್ಯಮ ಕೇಂದ್ರ

ರೈತ ಉತ್ಪಾದಕರ ಸಂಸ್ಥೆಗಳ, ರಫ್ತುದಾರರ ಸಮಾವೇಶದಲ್ಲಿ ಸಚಿವ ಬಿ.ಸಿ. ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 21:19 IST
Last Updated 20 ಆಗಸ್ಟ್ 2022, 21:19 IST
ನಗರದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ದೀಪ ಬೆಳಗುವ ಮುಖಾಂತರ ಉದ್ಘಾಟಿಸಿದರು. ಕೃಷಿ ಇಲಾಖೆ ಆಯುಕ್ತ ಬಿ.ಶರತ್, ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಎಂ.ವಿ.ವೆಂಕಟೇಶ್ ಇದ್ದರು –ಪ್ರಜಾವಾಣಿ ಚಿತ್ರ
ನಗರದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ದೀಪ ಬೆಳಗುವ ಮುಖಾಂತರ ಉದ್ಘಾಟಿಸಿದರು. ಕೃಷಿ ಇಲಾಖೆ ಆಯುಕ್ತ ಬಿ.ಶರತ್, ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಎಂ.ವಿ.ವೆಂಕಟೇಶ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ರಾಜ್ಯದ ಐದು ಕಡೆ ರಫ್ತು ಉದ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಜಲಾನಯನ ಅಭಿವೃದ್ಧಿ ಇಲಾಖೆ, ಕೆಪೆಕ್ ಹಾಗೂ ಅಪೆಡಾ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ರೈತ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ‘ಮೊದಲ ಹಂತದಲ್ಲಿ ವಿಜಯಪುರ ಜಿಲ್ಲೆಯ ಇಂಡಿ, ಹಾವೇರಿಯ ಹುನುಮನಮಟ್ಟಿ, ಮೈಸೂರಿನ ನಾಗೇನಹಳ್ಳಿ, ಚಿಕ್ಕಬಳ್ಳಾಪುರದ ವರದಗೇರಾ ಮತ್ತು ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಉದ್ಯಮ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ 1 ಹೆಕ್ಟೇರ್‌ಕ್ಕಿಂತ ಕಡಿಮೆ ಭೂಮಿ ಹೊಂದಿರುವ 69 ಲಕ್ಷ ರೈತರಿದ್ದಾರೆ. ಅವರು ಬೆಳೆದಂತಹ ಬೆಳೆಯನ್ನು ರಫ್ತು ಮಾಡುವ ಶಕ್ತಿಯಿಲ್ಲ. ಆದ್ದರಿಂದ ರೈತರ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳಲ್ಲಿ ಸೇರಿಕೊಂಡು, ಬೆಳೆದಂತಹ ಉತ್ಪನ್ನಗಳ ಲಭ್ಯತೆ, ವಿಂಗಡಣೆ, ಶ್ರೇಣೀಕರಣ, ಮೌಲ್ಯವರ್ಧನೆ, ಮಾಡಿಕೊಂಡು ಮಾರುಕಟ್ಟೆ ಸೃಷ್ಟಿಸಿಕೊಂಡು ಹೆಚ್ಚಿನ ಆದಾಯ ಗಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೃಷಿ ಇಲಾಖೆ ಸ್ಥಾಪಿಸಿರುವ ಕೆಪೆಕ್, ರೈತರು ಮತ್ತು ಗ್ರಾಹಕರ ಮಧ್ಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಯಲ್ಲಿ ಬೆಳೆದ ಉತ್ಪನ್ನಗಳನ್ನು ದಿಲ್ಲಿ ಸೇರಿದಂತೆ ವಿದೇಶಗಳಲ್ಲಿ ಮಾರಾಟ ಮಾಡಬಹುದು. ರಾಜ್ಯದಲ್ಲಿ 1100 ರೈತ ಉತ್ಪಾದಕ ಸಂಸ್ಥೆಗಳಿವೆ. ಇದರಲ್ಲಿ 11 ಲಕ್ಷ ರೈತರು ಸದಸ್ಯರಿದ್ದಾರೆ’ ಎಂದು ಹೇಳಿದರು.

*

ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಇವರ್‍ಯಾರಿಗೂ ಅನ್ನ ಕೊಡುವ ತಾಕತ್ತಿಲ್ಲ. ಅದು ದೇಶದ ರೈತರಿಂದ ಮಾತ್ರ ಸಾಧ್ಯ.
-ಬಿ.ಸಿ ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.