ADVERTISEMENT

ಮಾಜಿ ದೇವದಾಸಿಯರ ಸಮೀಕ್ಷೆ ಅವಧಿ ವಿಸ್ತರಿಸಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 13:57 IST
Last Updated 15 ಅಕ್ಟೋಬರ್ 2025, 13:57 IST
   

ಬೆಂಗಳೂರು: ‘ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಅನೇಕ ಮಾಜಿ ದೇವದಾಸಿಯರಿಗೆ ಮರು ಸಮೀಕ್ಷೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆದ್ದರಿಂದ ಮರು ಸಮೀಕ್ಷೆಯ ಅವಧಿಯನ್ನು ವಿಸ್ತರಿಸಬೇಕು ಎಂದು ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಆಗ್ರಹಿಸಿದೆ. 

ವೇದಿಕೆಯ ರಾಜ್ಯ ಘಟಕದ ಸಂಚಾಲಕ ಯಮನೂರಪ್ಪ, ಸದಸ್ಯರಾದ ದಂಡೆಮ್ಮ, ಸೋನಾಬಾಯಿ ಮಾತನಾಡಿ, ‘ಸಮೀಕ್ಷೆಯಲ್ಲಿ ಕೇಳುತ್ತಿರುವ ದಾಖಲೆಗಳನ್ನು ಮಾಜಿ ದೇವದಾಸಿಯರು ವಿವಿಧ ಇಲಾಖೆಗಳಿಂದ ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸಮಯಾವಕಾಶ ನೀಡುವುದರ ಜೊತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ದಾಖಲೆಗಳನ್ನು ನೀಡುವಂತೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು. 

‘ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ 45 ವರ್ಷ ಆದವರನ್ನು ಮಾತ್ರ ಪರಿಗಣಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಯಾವುದೇ ರೀತಿಯ ವಯೋಮಿತಿ ನಿಗದಿಪಡಿಸದೇ, ಎಲ್ಲರನ್ನೂ ಪರಿಗಣಿಸಬೇಕು. ಕೆಲವು ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಸಂಖ್ಯೆ ಹೆಚ್ಚಿದೆ. ಅಂತಹ ಜಿಲ್ಲೆಗಳಲ್ಲಿ ಇಬ್ಬರು ಸಮೀಕ್ಷಕರನ್ನು ನೇಮಿಸಬೇಕು’ ಎಂದು ಹೇಳಿದರು. 

ADVERTISEMENT

‘ಮಾಜಿ ದೇವದಾಸಿಯರು ಮತ್ತು ಅವರ ಕುಟುಂಬಕ್ಕೆ ಸಮೀಕ್ಷೆ ಪ್ರಾರಂಭಿಸುವುದರ ಕುರಿತು ಮಾಹಿತಿ ನೀಡಿಲ್ಲ. ಈ ಬಗ್ಗೆ ಹೆಚ್ಚು ಜಾಗೃತಿ ಮತ್ತು ಪ್ರಚಾರ ನಡೆಸಬೇಕು ಎಂದರು.   

‘ಎಲ್ಲ ಜಿಲ್ಲೆಗಳಲ್ಲಿ ಮರುಸಮೀಕ್ಷೆಗೆ ಒಂದೇ ರೀತಿಯ ನಿಯಮಗಳನ್ನು ಅಥವಾ ಮಾನದಂಡಗಳನ್ನು ಅನುಸರಿಸಬೇಕು. ಮಾಜಿ ದೇವದಾಸಿ ಮಹಿಳೆಯರ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಮರು ಸಮೀಕ್ಷೆಯ ಮೌಲ್ಯಮಾಪನ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ದೇವದಾಸಿಯರ ಸಮೀಕ್ಷೆಯನ್ನು ಅವರ ಮನೆಗಳಿಗೆ ತೆರಳಿ ಮಾಡುವಂತೆ ಸಮೀಕ್ಷೆದಾರರಿಗೆ ಸೂಚಿಸಬೇಕು’ ಎಂದು ವೇದಿಕೆಯ ಮುಖಂಡರಾದ ಷರೀಫ್, ಮಂಜುಳಾ ಮಾಳಗಿ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.