ADVERTISEMENT

ಪ್ರೇಮಿಗಳ ಸುಲಿಗೆ; ಯುವತಿಯ ಬೆತ್ತಲೆಗೊಳಿಸಿ ವಿಡಿಯೊ   

ದುಬಾಸಿಪಾಳ್ಯದ ರೈಲ್ವೆ ಗೇಟ್‌ ರಸ್ತೆಯಲ್ಲಿ ಘಟನೆ * ಕೆಂಗೇರಿ ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:02 IST
Last Updated 5 ಮಾರ್ಚ್ 2019, 20:02 IST
   

ಬೆಂಗಳೂರು: ಕೆಂಗೇರಿ ಸಮೀಪದ ದುಬಾಸಿಪಾಳ್ಯದಲ್ಲಿ ಪ್ರೇಮಿಗಳಿಗೆ ಚಾಕು ತೋರಿಸಿ ಸುಲಿಗೆ ಮಾಡಿದ ದುಷ್ಕರ್ಮಿಗಳು, ಕೊನೆಗೆ ಯುವತಿಯನ್ನು ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡು ಪರಾರಿಯಾಗಿದ್ದಾರೆ.

ಭಾನುವಾರ ರಾತ್ರಿ ನಡೆದಿರುವ ಘಟನೆ ಸಂಬಂಧ ಕ್ಯಾಬ್ ಚಾಲಕರೊಬ್ಬರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. ನಾಲ್ವರು ಅಪರಿಚಿತರು ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ಕ್ಯಾಬ್ ಚಾಲಕ, ಯುವತಿಯನ್ನು ಪ್ರೀತಿಸುತ್ತಿದ್ದಾರೆ. ಅವರಿಬ್ಬರು ದುಬಾಸಿಪಾಳ್ಯದ ರೈಲ್ವೆ ಗೇಟ್‌ನಿಂದ ಕೆಂಗೇರಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಅದರೊಳಗೆ ಕುಳಿತುಕೊಂಡಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಕೆಂಗೇರಿ ಪೊಲೀಸರು ಹೇಳಿದರು.

ADVERTISEMENT

ರೈಲಿಗಾಗಿ ಕಾಯುತ್ತಿದ್ದರು: ‘ಕ್ಯಾಬ್ ಚಾಲಕ, ಯುವತಿಯನ್ನು ಊರಿಗೆ ಕಳುಹಿಸುವುದಕ್ಕಾಗಿ ಭಾನುವಾರ ರಾತ್ರಿ ಕೆಂಗೇರಿ ರೈಲ್ವೆ ನಿಲ್ದಾಣಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಅವರು ಹೋಗುವಷ್ಟರಲ್ಲಿ ರೈಲು ಹೊರಟು ಹೋಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಸೋಮವಾರ ನಸುಕಿನ 5.15 ಗಂಟೆಗೆ ಬೇರೊಂದು ರೈಲು ಇತ್ತು.ವಾಪಸ್‌ ಮನೆಗೆ ಹೋದರೆ ಪುನಃ ಬರುವುದು ತಡವಾಗಬಹುದೆಂಬ ಕಾರಣಕ್ಕೆ ಇಬ್ಬರೂ ರೈಲ್ವೆ ಗೇಟ್‌ ಬಳಿಯ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಮಾತನಾಡುತ್ತ ಕುಳಿತುಕೊಂಡಿದ್ದರು’.

‘ಏಕಾಏಕಿ ಕಾರಿನ ಬಳಿ ಬಂದು ಸುತ್ತುವರಿದಿದ್ದ ದುಷ್ಕರ್ಮಿಗಳು, ಚಾಕು ತೋರಿಸಿ ಪ್ರೇಮಿಗಳನ್ನು ಕಾರಿನಿಂದ ಹೊರಗೆ ಇಳಿಸಿದ್ದರು. ಚಿನ್ನಾಭರಣ ಹಾಗೂ ಹಣ ಕೊಡುವಂತೆ ಪೀಡಿಸಿದ್ದರು. ‘ನಮ್ಮ ಬಳಿ ಹಣ ಹಾಗೂ ಚಿನ್ನಾಭರಣವಿಲ್ಲ’ ಎಂದು ಚಾಲಕ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ದುಷ್ಕರ್ಮಿಯೊಬ್ಬ ಯುವತಿಯ ಕುತ್ತಿಗೆಗೆ ಚಾಕು ಹಿಡಿದಿದ್ದ. ‘ಹಣ, ಚಿನ್ನಾಭರಣ ಕೊಡದಿದ್ದರೆ ಈಕೆಯನ್ನು(ಯುವತಿ) ಇಲ್ಲಿಯೇ ಮುಗಿಸಿಬಿಡುತ್ತೇನೆ’ ಎಂದು ಬೆದರಿಸಿದ್ದ. ಯುವತಿಗೆ ದುಷ್ಕರ್ಮಿ ಏನಾದರೂ ಮಾಡಬಹುದೆಂಬ ಭಯದಲ್ಲಿ ಚಾಲಕ, ತಮ್ಮ ಬಳಿಯ ಎಟಿಎಂ ಕಾರ್ಡ್‌ನ್ನು ಕೊಟ್ಟಿದ್ದರು’

‘ಚಾಲಕನನ್ನು ಬೆದರಿಸಿ ಪಾಸ್‌ವರ್ಡ್‌ ಪಡೆದುಕೊಂಡಿದ್ದ ದುಷ್ಕರ್ಮಿಯೊಬ್ಬ, ಹತ್ತಿರದಲ್ಲೇ ಇದ್ದ ಎಟಿಎಂ ಕೇಂದ್ರಕ್ಕೆ ಹೋಗಿ ₹25,000 ಡ್ರಾ ಮಾಡಿಕೊಂಡು ಬಂದಿದ್ದ. ಅದಾದ ನಂತರವೂ ಆರೋಪಿಗಳು, ಪ್ರೇಮಿಗಳಿಗೆ ಚಾಕು ತೋರಿಸಿ ಬೆದರಿಸುತ್ತಲೇ ಇದ್ದರು’ ಎಂದು ಪೊಲೀಸರು ಹೇಳಿದರು.

‘ಚಾಲಕನ ಎದುರೇ ಯುವತಿಯ ಬಟ್ಟೆ ಬಿಚ್ಚಿಸಿ ವಿಕೃತಿ ಮೆರೆದಿದ್ದ ದುಷ್ಕರ್ಮಿಗಳು, ಆ ಯುವತಿಯ ಬೆತ್ತಲೆ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ‘ಸುಲಿಗೆ ವಿಚಾರವನ್ನು ಯಾರಿಗಾದರೂ ಹೇಳಿದರೆ ಈ ವಿಡಿಯೊವನ್ನು ಫೇಸ್‌ಬುಕ್‌, ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತೇವೆ. ಸುದ್ದಿ ವಾಹಿನಿಗಳಿಗೆ ಕೊಟ್ಟು ನಿಮ್ಮ ಮಾನ ತೆಗೆಯುತ್ತೇವೆ’ ಎಂದು ಹೆದರಿಸಿದ್ದರು’.

‘ದುಷ್ಕರ್ಮಿಗಳ ಕಾಟ ವಿಪರೀತವಾಗುತ್ತಿದ್ದಂತೆ ಯುವತಿಯು ಸಹಾಯಕ್ಕಾಗಿ ಚೀರಾಡಲಾರಂಭಿಸಿದ್ದರು. ಆಗ ಆರೋಪಿಗಳು, ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಘಟನೆ ಸಂಬಂಧ ಚಾಲಕ ಹಾಗೂ ಯುವತಿ ಇಬ್ಬರಿಂದಲೂ ಹೇಳಿಕೆ ಪಡೆಯಲಾಗಿದೆ. ಬೆತ್ತಲೆ ವಿಡಿಯೊ ಚಿತ್ರೀಕರಣ ಮಾಡಿಕೊಂಡಿರುವುದನ್ನು ಅವರೇ ಹೇಳಿಕೊಂಡಿದ್ದಾರೆ. ಆರೋಪಿಗಳು ಸಿಕ್ಕ ಬಳಿಕ ಅವರ ಮೊಬೈಲ್ ಪರಿಶೀಲನೆ ನಡೆಸಿದರೆ ಆ ಬಗ್ಗೆ ಮಾಹಿತಿ ತಿಳಿಯಲಿದೆ’ ಎಂದರು.

‘ನಿರ್ಜನ ಪ್ರದೇಶದಲ್ಲಿ ಪ್ರೇಮಿಗಳಷ್ಟೇ ಇದ್ದರು. ಅದೇ ಕಾರಣಕ್ಕೆ ದುಷ್ಕರ್ಮಿಗಳು, ಅವರನ್ನು ಸುಲಿಗೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ಆದಷ್ಟು ಬೇಗ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.