ಬೆಂಗಳೂರು: ನಾರಾಯಣ ನೇತ್ರಾಲಯವು 40ನೇ ವರ್ಷದ ನೇತ್ರದಾನ ಪಾಕ್ಷಿಕದ ಪ್ರಯುಕ್ತ ನಗರದಲ್ಲಿ ಕಣ್ಣುಗಳ ದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸೀತಾರಾಮಪಾಳ್ಯ ಮೆಟ್ರೊ ನಿಲ್ದಾಣದ ಬಳಿ ಇರುವ ವೈಟ್‌ಫೀಲ್ಡ್ ನಾರಾಯಣ ನೇತ್ರಾಲಯ ಶಾಖೆಯು ಇದೇ 7ರಂದು ‘ರೈಡ್ ಫಾರ್ ಸೈಟ್’ ಶೀರ್ಷಿಕೆಯಡಿ ಸೈಕ್ಲೋಥಾನ್ ಹಮ್ಮಿಕೊಂಡಿದೆ. ನೇತ್ರ ದಾನ ಪ್ರತಿಜ್ಞೆ ಕೈಗೊಳ್ಳುವುಂತೆ ಈ ಸೈಕ್ಲೋಥಾನ್‌ನಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನೇತ್ರದಾನ ಕೇಂದ್ರೀಕೃತ ವಿಷಯಗಳ ಮೇಲೆ ಮಕ್ಕಳು ಸೇರಿ ವಿವಿಧ ವಯೋಮಾನದವರಿಗೆ ಆನ್‌ಲೈನ್ ವೇದಿಕೆ ಮೂಲಕ ಚಿತ್ರಕಲೆ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯ ವಿವರಗಳು ನಾರಾಯಣ ನೇತ್ರಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
‘ಭಾರತದಲ್ಲಿ 13 ಲಕ್ಷ ಮಂದಿ ಎರಡೂ ಕಾರ್ನಿಯಾಗಳ (ಬೈಲ್ಯಾಟರಲ್) ದೃಷ್ಟಿ ಹೀನತೆಯಿಂದ ಬಳಲುತ್ತಿದ್ದಾರೆ. 1.06 ಕೋಟಿ ಜನರು ಏಕ ಕಾರ್ನಿಯಾ ದೃಷ್ಟಿ ಹೀನತೆ (ಯುನಿಲ್ಯಾಟರಲ್) ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ವರ್ಷ 30 ಸಾವಿರದಿಂದ 50 ಸಾವಿರ ದೃಷ್ಟಿ ಸಂಬಂಧಿತ ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುತ್ತಿವೆ. ವಾರ್ಷಿಕ 50 ಸಾವಿರದಿಂದ 60 ಸಾವಿರ ಕಾರ್ನಿಯಾದ ಅಂಗಾಂಶ ಸಂಗ್ರಹವಾಗುತ್ತಿದೆ. ನೇತ್ರದಾನಿಗಳ ಕೊರತೆಯಿಂದಾಗಿ ಕಣ್ಣುಗಳಿಗಾಗಿ ಕಾಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ’ ಎಂದು ನಾರಾಯಣ ನೇತ್ರಾಲಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಕೆ. ಮಿತ್ತಲ್ ತಿಳಿಸಿದ್ದಾರೆ.
‘ನಾರಾಯಣ ನೇತ್ರಾಲಯ ಐ ಫೌಂಡೇಷನ್ ಸದ್ಯ ಡಾ. ರಾಜ್‌ಕುಮಾರ್ ಐ ಬ್ಯಾಂಕ್ ಮತ್ತು ಶಂಕರ್ ಸಿಂಗ್ ಐ ಬ್ಯಾಂಕ್ ನಿರ್ವಹಿಸುತ್ತಿದೆ. ಈ ಎರಡೂ ಕೇಂದ್ರಗಳನ್ನು ನಾರಾಯಣ ಹೆಲ್ತ್ ಸಿಟಿಯಲ್ಲಿ 2008ರಲ್ಲಿ ಸ್ಥಾಪಿಸಲಾಗಿದೆ. ನೇತ್ರದಾನ ಪ್ರತಿಜ್ಞೆ ಕೈಗೊಳ್ಳುವವರು 8884018800 ಈ ಸಂಖ್ಯೆಗೆ ಮಿಸ್‌ಕಾಲ್ ನೀಡಬಹುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.