ADVERTISEMENT

ಬೆಂಗಳೂರು: ₹ 10 ಲಕ್ಷ ಕಿತ್ತ ಫೇಸ್‌ಬುಕ್ ಸ್ನೇಹಿತ

​ಪ್ರಜಾವಾಣಿ ವಾರ್ತೆ
Published 1 ಮೇ 2021, 16:16 IST
Last Updated 1 ಮೇ 2021, 16:16 IST
   

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಉಡುಗೊರೆ ಆಮಿಷವೊಡ್ಡಿ ನಗರದ ಶಿಕ್ಷಕಿಯೊಬ್ಬರಿಂದ ₹ 10 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಉಪವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ದೂರವಾಣಿ ನಗರದ 43 ವರ್ಷದ ಶಿಕ್ಷಕಿ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ವಿದೇಶಿ ಪ್ರಜೆ ಕೆಲ್ಲಿ ಜಾನ್ಸನ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಏಪ್ರಿಲ್ 3ರಂದು ಆರೋಪಿ ಕೆಲ್ಲಿ ಜಾನ್ಸನ್ ಫೇಸ್‌ಬುಕ್‌ನಲ್ಲಿ ಶಿಕ್ಷಕಿಗೆ ಫ್ರೇಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಶಿಕ್ಷಕಿ ಸ್ವೀಕರಿಸುತ್ತಿದ್ದಂತೆ ಚಾಟಿಂಗ್ ಮಾಡಲಾರಂಭಿಸಿದ್ದ. ‘ನೀವು ನನ್ನ ಒಳ್ಳೆಯ ಸ್ನೇಹಿತೆ. ನನ್ನ ನೆನಪಿಗಾಗಿ ಏನಾದರೂ ಉಡುಗೊರೆ ಕಳುಹಿಸುತ್ತೇನೆ. ಸದ್ಯದಲ್ಲೇ ನಿಮ್ಮ ವಿಳಾಸಕ್ಕೆ ಉಡುಗೊರೆ ಬರಲಿದೆ’ ಎಂದು ಆರೋಪಿ ಹೇಳಿದ್ದ. ಅದಕ್ಕೆ ಶಿಕ್ಷಕಿ ಒಪ್ಪಿದ್ದರು.’

ADVERTISEMENT

‘ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದ ಕೋರಿಯರ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ, ಏಪ್ರಿಲ್ 15ರಂದು ಶಿಕ್ಷಕಿಗೆ ಕರೆ ಮಾಡಿದ್ದ. ‘ವಿದೇಶದಿಂದ ನಿಮಗೊಂದು ಕೋರಿಯರ್ ಬಂದಿದೆ. ಅದರಲ್ಲಿ ಹಣ ಹಾಗೂ ಬೆಲೆಬಾಳುವ ಚಿನ್ನಾಭರಣಗಳಿವೆ. ಅದನ್ನು ನಿಮ್ಮ ವಿಳಾಸಕ್ಕೆ ತಲುಪಿಸಬೇಕಾದರೆ ಕೆಲ ಶುಲ್ಕಗಳನ್ನು ಪಾವತಿಸಬೇಕು’ ಎಂದಿದ್ದ. ಅದನ್ನು ನಂಬಿದ್ದ ಶಿಕ್ಷಕಿ, ಆರೋಪಿ ನೀಡಿದ್ದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 10 ಲಕ್ಷ ಪಾವತಿಸಿದ್ದರು’ ಎಂದೂ ಮೂಲಗಳು ಹೇಳಿವೆ.

‘ದಿನ ಕಳೆದರೂ ಯಾವುದೇ ಉಡುಗೊರೆ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಲು ಯತ್ನಿಸಿದಾಗ ಕೋರಿಯರ್ ಅಧಿಕಾರಿ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ಆರೋಪಿ ಕೆಲ್ಲಿ ಜಾನ್ಸನ್ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಜಾಲದ ವಿರುದ್ಧ ಶಿಕ್ಷಕಿ ಇದೀಗ ಠಾಣೆಗೆ ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.