ADVERTISEMENT

‘ಮನುಷ್ಯ ವಿಕಸನಗೊಂಡಂತೆ ಮರೆಯಾದ ದೂರದೃಷ್ಟಿ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:29 IST
Last Updated 24 ಡಿಸೆಂಬರ್ 2020, 19:29 IST
ಭೂವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎಚ್. ಹೊನ್ನೇಗೌಡ, ಡಾ. ವೀಣಾ ಜೋಶಿ ಅವರಿಗೆ ‘ಯುಜಿಐಟಿ ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ.ಎ.ಎಸ್. ಕಿರಣ್‌ಕುಮಾರ್‌ ಮತ್ತು ಪ್ರೊ.ಕೆ.ಆರ್. ವೇಣುಗೋಪಾಲ್‌ ಇತರರು ಇದ್ದಾರೆ
ಭೂವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎಚ್. ಹೊನ್ನೇಗೌಡ, ಡಾ. ವೀಣಾ ಜೋಶಿ ಅವರಿಗೆ ‘ಯುಜಿಐಟಿ ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ.ಎ.ಎಸ್. ಕಿರಣ್‌ಕುಮಾರ್‌ ಮತ್ತು ಪ್ರೊ.ಕೆ.ಆರ್. ವೇಣುಗೋಪಾಲ್‌ ಇತರರು ಇದ್ದಾರೆ   

ಬೆಂಗಳೂರು: ‘ಮನುಷ್ಯ ವಿಕಸನಗೊಂಡು ಅಭಿವೃದ್ಧಿ ಹೊಂದಲು ಪ್ರಾರಂಭಿಸಿದ ಬಳಿಕ ಮಣ್ಣಿನ ಸಂರಕ್ಷಣೆಯ ಬಗ್ಗೆ ದೂರದೃಷ್ಟಿ ಕಳೆದುಕೊಂಡ. ಭೂಮಿಯ ಮೇಲೆ ಲಭ್ಯವಿರುವ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಮರೆತ’ ಎಂದು ಹಿರಿಯ ವಿಜ್ಞಾನಿ, ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗ ಮತ್ತು ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ವತಿಯಿಂದ ‘ಮಣ್ಣಿನ ಸಂರಕ್ಷಣೆ ಮತ್ತು ಭೂಬಳಕೆ–ಭೂವೈಜ್ಞಾನಿಕ ಪರಿಹಾರಗಳು’ ವಿಷಯ ಕುರಿತು ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ‘ಭಾರತೀಯ ಕೃಷಿ ಪದ್ಧತಿಗಳು ಹಾಗೂ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿನ ಸಾಂಪ್ರದಾಯಿಕ ಬುದ್ಧಿವಂತಿಕೆ ಕುರಿತು ಮಾತನಾಡಿದರು.

ವಿಕ್ರಮ್ ಸಾರಾಭಾಯ್ ಅವರ ಆವಿಷ್ಕಾರಗಳು ಹಾಗೂ ‘ಚಮನ್’ ತಂತ್ರಾಂಶದ ಬಗ್ಗೆಯೂ ಮಾಹಿತಿ ನೀಡಿದ ಅವರು, ಅವುಗಳಲ್ಲಿ ಕೃಷಿ ಹಾಗೂ ತೋಟಗಾರಿಕೆಯ ಬಗ್ಗೆ ದೊರಕುವ ಮಾಹಿತಿಗಳು, ಅವುಗಳಿಂದ ರೈತರಿಗೆ ಆಗುವ ಉಪಯೋಗಗಳ ಕುರಿತು ವಿವರಿಸಿದರು.

ADVERTISEMENT

ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ. ಎಸ್‌. ಅಯ್ಯಪ್ಪನ್‌, ‘ಟೊಮೆಟೊ ಒಂದು ಹಣ್ಣು, ಅದು ತರಕಾರಿ ಅಲ್ಲ ಎನ್ನುವುದು ಜ್ಞಾನ. ಟೊಮೆಟೊ ಒಂದು ಹಣ್ಣು. ಆದರೂ ಫ್ರೂಟ್ ಸಲಾಡ್‌ನಲ್ಲಿ ಅದನ್ನು ಬಳಸುವಂತಿಲ್ಲ ಎಂಬುದು ಬುದ್ಧಿವಂತಿಕೆ. ಇಂತಹ ಮಾಹಿತಿ, ಜ್ಞಾನ ಹಾಗೂ ಬುದ್ಧಿವಂತಿಕೆಗಳನ್ನು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕು. ಕೃಷಿಯ ಆತ್ಮ ಮಣ್ಣು ಎಂಬ ಅರಿವು ಮೂಡಿಸಬೇಕು’ ಎಂದರು.

ಭೂವೈಜ್ಞಾನಿಕ ವಿಷಯದಲ್ಲಿ ಸಾಧನೆ ಮಾಡಿದ ಡಾ.ಎಚ್. ಹೊನ್ನೇಗೌಡ, ಡಾ. ವೀಣಾ ಜೋಶಿ, ಡಾ. ಡಾ. ಎನ್‌. ಶಿವಜ್ಞಾನಂ ಅವರಿಗೆ ‘ಯುಜಿಐಟಿ ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್ ಡಿ.ಹಂಜಗಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.