ವಂಚನೆ– ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಫ್ಲ್ಯಾಟ್ ಮಾರಾಟ ಮಾಡುವುದಾಗಿ ದಾಖಲಾತಿಗಳನ್ನು ಪಡೆದು ವೃದ್ದೆಯ ನಕಲಿ ಸಹಿ ಸೃಷ್ಟಿಸಿ, ಬ್ಯಾಂಕ್ಗಳಲ್ಲಿ ನಕಲಿ ಖಾತೆ ತೆರೆದು, ₹1.90 ಕೋಟಿ ಸಾಲ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ವಿರುದ್ಧ ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
ಕೆ.ಬಿ.ಸಂದ್ರ ನಿವಾಸಿ 71 ವರ್ಷದ ಮೇರಿ ಹೇರಿಯೇಟ್ ಅವರ ದೂರು ಆಧರಿಸಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅನುರಾಗ್, ದೂರುದಾರರ ಆಪ್ತ ಸಹಾಯಕ ಸೂರ್ಯ, ಗಂಗಾನಗರ ಹಾಗೂ ಬ್ಯಾಟರಾಯನಪುರ ಉಪ ನೋಂದಣಿಧಿಕಾರಿಗಳಾದ ಶಾಂತಮೂರ್ತಿ ಹಾಗೂ ವಾಸುದೇವಮೂರ್ತಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಅನ್ವರ್ ಸೇರಿ 11 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಆರ್. ಟಿ. ನಗರ ನಿವಾಸಿಯಾಗಿರುವ ಮೇರಿ ಅವರು ಕಾವಲ್ ಬೈರಂದ್ರದಲ್ಲಿ ಇರುವ ಮೂರು ಫ್ಲ್ಯಾಟ್ಗಳನ್ನು ಮಾರಾಟ ಮಾಡಿಕೊಡುವಂತೆ ಅನುರಾಗ್ಗೆ ಹೇಳಿದ್ದರು. ಹಾಗಾಗಿ ಆಸ್ತಿ ಮಾರಾಟಕ್ಕಾಗಿ ವೃದ್ದೆಯ ಆಪ್ತ ಸಹಾಯಕ ಸೂರ್ಯ ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿ ಅಗತ್ಯ ದಾಖಲಾತಿಗಳನ್ನು ಆರೋಪಿ ಪಡೆದುಕೊಂಡಿದ್ದ.
ವಂಚನೆ ಉದ್ದೇಶದಿಂದ ನಕಲಿ ಸಹಿ ಸೃಷ್ಟಿಸಿ, ಸ್ವತ್ತಿನ ಮಾಲೀಕರಂತೆ ಅನ್ಯ ವ್ಯಕ್ತಿಯನ್ನು ತೋರಿಸಿ ಉಪ ನೋಂದಣಿ ಕಚೇರಿಗಳಲ್ಲಿ ಅಧಿಕಾರಿಗಳ ನೆರವಿನಿಂದ ಎರಡು ಫ್ಲ್ಯಾಟ್ಗಳನ್ನು ಹೇಮಂತ್ ಕುಮಾರ್ ಹಾಗೂ ವಿಷ್ಣು ಎಂಬುವರಿಗೆ ಮಾರಾಟ ಮಾಡಿದ್ದ ಎಂಬುದಾಗಿ ವೃದ್ಧೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಸಲಿ ಸ್ವತ್ತಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಅರ್ಜುನ್ ಸೌಹಾರ್ದ ಪತ್ತಿನ ಸಹಕಾರ ನಿಯಮಿತದಲ್ಲಿ ದೂರುದಾರರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿದ್ದ. ಎರಡೂ ಬ್ಯಾಂಕ್ಗಳಿಂದ ಒಟ್ಟು ₹1.90 ಕೋಟಿ ಸಾಲ ಮಂಜೂರು ಮಾಡಿಸಿಕೊಂಡು, ಬಳಿಕ ತನ್ನ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದ. ಇತ್ತೀಚೆಗೆ ಬ್ಯಾಂಕ್ಗಳಿಂದ ವೃದ್ಧೆಗೆ ಕರೆ ಬಂದಾಗ ವಂಚನೆ ಜಾಲ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾರಾಟ ಮಾಡಿದ ಎರಡು ಫ್ಲ್ಯಾಟ್ಗಳನ್ನು ಖರೀದಿಸಿದ್ದ ಹೇಮಂತ್ ಹಾಗೂ ವಿಷ್ಣು ಎಂಬುವವರು ಈವರೆಗೂ ಮನೆಗಳನ್ನು ಸುಪರ್ದಿಗೆ ತೆಗೆದುಕೊಂಡಿಲ್ಲ. ವಂಚನೆ ಜಾಲದಲ್ಲಿ ಇವರ ಕೈವಾಡವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ತೆರಳಿ ಮಹಜರು ಕಾರ್ಯ ಪೂರ್ಣಗೊಳಿಸಲಾಗಿದೆ. ವಂಚನೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಂಗ್ರಹಿಸಿ, ಪರಿಶೀಲನೆ ನಡೆಸಲಾಗುತ್ತಿದೆ. ವಂಚನೆ ಎಸಗಿರುವುದು ದೃಢವಾದರೆ ಆರೋಪಿಗಳನ್ನು ಬಂಧಿಸಲಾಗುವುದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.