ಬೆಂಗಳೂರು: ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲಿ ಜಾಮೀನು ನೀಡುತ್ತಿದ್ದ ಎಂಟು ಆರೋಪಿಗಳನ್ನು ಕೇಂದ್ರ ವಿಭಾಗದ ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಕೆ.ರಫಿ (33), ಬೆಂಗಳೂರಿನ ಯಲಹಂಕ ತಾಲ್ಲೂಕಿನ ಸಿಂಗಹಳ್ಳಿಯ ಎಸ್.ಜಿ.ಪ್ರವೀಣ್ ಕುಮಾರ್ (32), ತುಮಕೂರು ಜಿಲ್ಲೆಯ ತಿಪಟೂರಿನ ಅಭಿಷೇಕ್ (33), ಆನೇಕಲ್ ತಾಲ್ಲೂಕಿನ ಮೈಸೂರಮ್ಮದೊಡ್ಡಿಯ ನಿವಾಸಿ ಗೋವಿಂದನಾಯ್ಕ್ (37), ರಾಮನಗರ ಜಿಲ್ಲೆಯ ಗಂಗೋಣಹಳ್ಳಿಯ ನಿವಾಸಿ ದೊರೆರಾಜು (32), ಬೆಂಗಳೂರಿನ ಬಿಟಿಎಂ ಲೇಔಟ್‌ನ ಗುರಪ್ಪಪಾಳ್ಯದ ಅಬೀದ್ ವಾಸೀಂ (46), ಯಶವಂತಪುರದ ಅಹಮ್ಮದ್ ಜುಬೇರ್ (23) ಹಾಗೂ ತುರುವೇಕೆರೆ ತಾಲ್ಲೂಕು ತಾವರೆಕೆರೆಯ ಟಿ.ಡಿ.ಗೋವಿಂದರಾಜು (32) ಬಂಧಿತರು.
ಆರೋಪಿಗಳಿಂದ 47 ನಕಲಿ ಆಧಾರ್ ಕಾರ್ಡ್‌ಗಳು, ಆರ್‌ಟಿಸಿ, ವಿವಿಧ ಮಾದರಿಯ 122 ನಕಲಿ ದಾಖಲೆಗಳು, ಪೆನ್ ಡ್ರೈವ್, ಏಳು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ನಾಲ್ಕನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರ್ ಡಿ.ಸೆಲ್ವರಾಜ್ ಹಾಗೂ ಹಲಸೂರು ಗೇಟ್ ಠಾಣೆಯ ಪಿಎಸ್‌ಐ ಭಗವಂತ್ರಾಲಯ ಮಾಶ್ಯಾಳ್ ಅವರು ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
‘ನಕಲಿ ಆಧಾರ್ ಕಾರ್ಡ್, ಆರ್‌ಟಿಸಿ, ಮ್ಯುಟೇಷನ್ ಹಾಗೂ ವಿವಿಧ ಸರ್ಕಾರಿ ಇಲಾಖೆಯ ನಕಲಿ ವೇತನ ಚೀಟಿಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ ಆರೋಪಿಗಳು, ನ್ಯಾಯಾಲಯದಲ್ಲಿ ಜಾಮೀನು ಕೋರಿರುವ ಆರೋಪಿಗಳನ್ನು ಪತ್ತೆಹಚ್ಚುತ್ತಿದ್ದರು. ಜಾಮೀನು ಕೋರಿರುವ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ನಕಲಿ ದಾಖಲೆಗಳನ್ನು ಸಲ್ಲಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಭೂಮಿ ಆ್ಯಪ್’ ಮೂಲಕ ಬೇರೆಯವರ ಪಹಣಿಯ ವಿವರ ಪಡೆದುಕೊಳ್ಳುತ್ತಿದ್ದ ಆರೋಪಿಗಳು, ಅದರಲ್ಲಿನ ವಿಳಾಸಕ್ಕೆ ಹೊಂದಿಕೆ ಆಗುವಂತೆ ನಕಲಿ ಆಧಾರ್ ಕಾರ್ಡ್ ಮಾದರಿ ಸೃಷ್ಟಿಸುತ್ತಿದ್ದರು. ಆ ಆಧಾರ್‌ಗೆ ಯಾವುದೊ ಒಂದು ನಂಬರ್ ನಮೂದಿಸಿ, ಶೂರಿಟಿ ನೀಡಲು ಹೋಗುವವರ ಫೋಟೊ ಸೇರಿಸುತ್ತಿದ್ದರು. ಅದರೊಂದಿಗೆ ಶೂರಿಟಿ ನೀಡುವ ವ್ಯಕ್ತಿ, ಬ್ಯಾಂಕ್ ಪಾಸ್‌ಬುಕ್ ಜೊತೆ ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ಪಡೆಯಲು ನೆರವಾಗುತ್ತಿದ್ದ. ಪ್ರಕರಣವೊಂದರಲ್ಲಿ ನ್ಯಾಯಾಲಯದ ಕಲಾಪ ಪ್ರಕ್ರಿಯೆ ನಡೆಯುವಾಗ ಆರೋಪಿಗಳ ವಂಚನೆ ಬಯಲಾಗಿತ್ತು. ಕೂಡಲೇ 4ನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.