ADVERTISEMENT

ನಕಲಿ ಗ್ಯಾರಂಟಿ: ₹5 ಕೋಟಿ ಪಡೆದಿದ್ದ ಸಿಎ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 0:11 IST
Last Updated 7 ಏಪ್ರಿಲ್ 2024, 0:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ಪಡೆಯಲು ನಕಲಿ ಎಲೆಕ್ಟ್ರಾನಿಕ್‌ ಬ್ಯಾಂಕ್ ಗ್ಯಾರಂಟಿ (ಇ–ಬಿಜಿ) ನೀಡುತ್ತಿದ್ದ ಪ್ರಕರಣದಲ್ಲಿ ಬಂಧಿಸಲಾಗಿರುವ ಲೆಕ್ಕ ಪರಿಶೋಧಕ (ಸಿ.ಎ) ಆಶೀಷ್ ಸಕ್ಸೇನಾ ಅಲಿಯಾಸ್ ರಾಯ್ (45), ₹ 5 ಕೋಟಿ ಕಮಿಷನ್ ಪಡೆದಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್‌ (ಎನ್‌ಇಎಸ್ಎಲ್‌) ಅಧಿಕಾರಿಗಳು ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿರುವ ನಗರದ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು, ಆಶೀಷ್‌ ಸಕ್ಸೇನಾನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.

ADVERTISEMENT

‘ದೇಶದ ವಿವಿಧ ರಾಜ್ಯಗಳ ಗುತ್ತಿಗೆದಾರರು, ಎನ್‌ಇಎಸ್ಎಲ್‌ ಜಾಲತಾಣದಲ್ಲಿ ನಕಲಿ ಎಲೆಕ್ಟ್ರಾನಿಕ್‌ ಬ್ಯಾಂಕ್ ಗ್ಯಾರಂಟಿ ಅಪ್‌ಲೋಡ್ ಮಾಡಿದ್ದರು. ಅವುಗಳ ಪರಿಶೀಲನೆ ಸಂದರ್ಭದಲ್ಲಿ, ನಕಲಿ ಎಂಬುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಉತ್ತರ ಪ್ರದೇಶದ ಆಶೀಷ್, ವೃತ್ತಿಯಲ್ಲಿ ಲೆಕ್ಕ ಪರಿಶೋಧಕ. ದೇಶದ ವಿವಿಧ ಲೆಕ್ಕ ಪರಿಶೋಧಕರ ಜೊತೆ ಒಡನಾಟವಿಟ್ಟುಕೊಂಡಿದ್ದ. ಅವರ ಮೂಲಕ ಗುತ್ತಿಗೆದಾರರನ್ನು ಸಂಪರ್ಕಿಸಿ, ಯಾವುದೇ ಮುಂಗಡ ಹಣವಿಲ್ಲದೇ ಬ್ಯಾಂಕ್ ಗ್ಯಾರಂಟಿ ಕೊಡಿಸುವುದಾಗಿ ಹೇಳುತ್ತಿದ್ದ’ ಎಂದು ತಿಳಿಸಿದರು.

‘11 ಗುತ್ತಿಗೆದಾರರಿಂದ ₹ 5 ಕೋಟಿ ಪಡೆದಿದ್ದ ಆರೋಪಿ, ₹ 168.13 ಕೋಟಿ ಮೌಲ್ಯದ ನಕಲಿ ಇ–ಬ್ಯಾಂಕ್ ಗ್ಯಾರಂಟಿ ಮಾಡಿಕೊಟ್ಟಿದ್ದ. ಆರೋಪಿ ಗುತ್ತಿಗೆದಾರರಿಗೆ ನೀಡಿದ್ದ ಎಲ್ಲ ದಾಖಲೆಗಳು ನಕಲಿಯಾಗಿದ್ದವು. ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ಗಳಿಂದಲೂ ಮಾಹಿತಿ ಪಡೆಯಲಾಗಿದೆ. ಜೊತೆಗೆ, ಗುತ್ತಿಗೆದಾರರಿಗೂ ನೋಟಿಸ್ ನೀಡಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಆಶೀಷ್ ಸಕ್ಸೇನಾ ಕೃತ್ಯದಲ್ಲಿ ಇನ್ನೊಬ್ಬ ಆರೋಪಿ ಶಾಮೀಲಾಗಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.