ADVERTISEMENT

ನಕಲಿ ಫಲಕ, ತಪ್ಪು ಗ್ರಹಿಕೆಯಿಂದ ದಂಡ: ಸಂಚಾರ ನಿಯಮ ಪಾಲಿಸಿದವರ ಮೇಲೂ ಪ್ರಕರಣ

ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 4:43 IST
Last Updated 8 ಫೆಬ್ರುವರಿ 2023, 4:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಫಲಕ ಹಾಗೂ ಸಂಚಾರ ಪೊಲೀಸರ ತಪ್ಪು ಗ್ರಹಿಕೆಯಿಂದ ಹಲವು ವಾಹನಗಳ ಮೇಲೆ ಪ್ರಕರಣಗಳು ದಾಖಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡ ಪಾವತಿಸಲು ಆಸಕ್ತಿ ತೋರುತ್ತಿದ್ದಾರೆ. ಇದರ ನಡುವೆಯೇ ಕೆಲ ಸಾರ್ವಜನಿಕರು, ಸುಳ್ಳು ಪ್ರಕರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ನಿಯಮ ಉಲ್ಲಂಘನೆ ಮಾಡದಿದ್ದರೂ ವಾಹನದ ಮೇಲೆ ಸುಖಾಸುಮ್ಮನೇ ಪ್ರಕರಣಗಳು ದಾಖಲಾಗಿವೆ. ಮಾಡದ ತಪ್ಪಿಗೆ ದಂಡ ತುಂಬುವುದೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದೇವೆ’ ಎಂದು ದ್ವಿಚಕ್ರ ವಾಹನ ಮಾಲೀಕರೊಬ್ಬರು ಹೇಳಿದರು.

ADVERTISEMENT

ಪರಿಶೀಲನೆ ವೇಳೆ ಸುಳ್ಳು ಪ್ರಕರಣ ಪತ್ತೆ: ಶೇ 50ರಷ್ಟು ರಿಯಾಯಿತಿ ಇರುವುದರಿಂದ ಹೆಚ್ಚಿನ ಜನ, ತಮ್ಮ ವಾಹನಗಳ ಮೇಲಿನ ದಂಡದ ವಿವರವನ್ನು ಆನ್‌ಲೈನ್‌ ಮೂಲಕ ಪರಿಶೀಲಿಸುತ್ತಿದ್ದಾರೆ. ಈ ಪೈಕಿ ಹಲವರ ವಾಹನಗಳ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗುತ್ತಿದೆ.

‘ನನ್ನ ಬಳಿ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವಿದೆ. ಇದರ ನೋಂದಣಿ ಸಂಖ್ಯೆಯನ್ನು ಅಪರಿಚಿತನೊಬ್ಬ ತನ್ನ ಪಲ್ಸರ್ ಬೈಕ್‌ಗೆ ಹಾಕಿಕೊಂಡು ಓಡಾಡುತ್ತಿದ್ದಾನೆ. ಆತ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ನನ್ನ ವಾಹನದ ಮೇಲೆ ದಂಡ ವಿಧಿಸಲಾಗಿದೆ’ ಎಂದು ಸಂಜಯನಗರದ ನಿವಾಸಿಯೊಬ್ಬರು ಹೇಳಿದರು.

ರಾಜಾಜಿನಗರದ ನಿವಾಸಿ ಯೊಬ್ಬರು, ‘ನಿಯಮ ಉಲ್ಲಂಘಿಸಿದ್ದ ಬೈಕ್‌ನ ನೋಂದಣಿ ಫಲಕದ ಸಂಖ್ಯೆಯನ್ನು ತಪ್ಪಾಗಿ ಗ್ರಹಿಸಿರುವ ಪೊಲೀಸರು, ನನ್ನ ವಾಹನದ ಮೇಲೆ ದಂಡ ಹಾಕಿದ್ದಾರೆ. ಉಲ್ಲಂಘನೆಯ ಫೋಟೊ ನೋಡಿದಾಗ, ಬೇರೆ ವಾಹನದ ಫೋಟೊ ಇದೆ’ ಎಂದರು.

‘ನಕಲಿ ನೋಂದಣಿ ಸಂಖ್ಯೆ ಫಲಕ ಹಾಗೂ ಪೊಲೀಸರ ತಪ್ಪು ಗ್ರಹಿಕೆಯಿಂದ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.