ADVERTISEMENT

ನರ್ಸಿಂಗ್ ಪರೀಕ್ಷೆಯಲ್ಲೂ ನಕಲಿ ಅಭ್ಯರ್ಥಿಗಳು: ಬಂಧನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 22:02 IST
Last Updated 8 ಏಪ್ರಿಲ್ 2021, 22:02 IST

ಬೆಂಗಳೂರು: ನರ್ಸಿಂಗ್ ಪರೀಕ್ಷೆ ಬರೆಯಬೇಕಿದ್ದ ಅಸಲಿ ಅಭ್ಯರ್ಥಿಗಳ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ನಕಲಿ ಅಭ್ಯರ್ಥಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಗುಜರಾತ್‌ನ ನೀಲಂ ವಾಕರ್ ಹಾಗೂ ಎಲ್ಸಿ ಬಂಧಿತರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಇಬ್ಬರು, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹನುಮಂತನಗರದ ಶ್ರೀ ಭವಾನಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆ ಮನೀಶಾ ಡೇರಿಯಾ ಹಾಗೂ ನಟೂರಿಯಾ ಸುಮೈಯಾ ಎಂಬುವವರು ಹಾಜರಾಗಬೇಕಿತ್ತು. ಆದರೆ, ಅವರ ಬದಲು ಆರೋಪಿಗಳು ಹಾಜರಾಗಿದ್ದರು.’

ADVERTISEMENT

‘ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲೇ ಮೇಲ್ವಿಚಾರಕರು ಪರಿಶೀಲನೆ ನಡೆಸಿದ್ದರು. ಅವಾಗಲೇ ಆರೋಪಿಗಳ ಕೃತ್ಯ ಬಯಲಾಯಿತು. ಸ್ಥಳದಲ್ಲಿದ್ದ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು’ ಎಂದೂ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಪೊಲೀಸ್ ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲೂ ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದರು. ಅವರೆಲ್ಲ ಸದ್ಯ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.