ADVERTISEMENT

ಶಾಸಕ ಗೂಳಿಹಟ್ಟಿ ಹೆಸರಿನಲ್ಲಿ ನಕಲಿ ಪತ್ರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 19:56 IST
Last Updated 5 ಮಾರ್ಚ್ 2020, 19:56 IST
ಗೂಳಿಹಟ್ಟಿ ಶೇಖರ್‌
ಗೂಳಿಹಟ್ಟಿ ಶೇಖರ್‌   

ಬೆಂಗಳೂರು: ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಹೆಸರಿನಲ್ಲಿ ನಕಲಿ ಶಿಫಾರಸು ಪತ್ರ ಸೃಷ್ಟಿಸಲಾಗಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಕಲಿ ಪತ್ರದ ಬಗ್ಗೆ ಗೂಳಿಹಟ್ಟಿ ಶೇಖರ್ ಅವರೇ ದೂರು ನೀಡಿದ್ದಾರೆ. ಪತ್ರ ಸೃಷ್ಟಿಸಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸುರೇಶ್ ಎಂಬುವರನ್ನು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವಂತೆ ನಕಲಿ ಶಿಫಾರಸು ಪತ್ರದಲ್ಲಿ ಬರೆಯಲಾಗಿತ್ತು. ಅದೇ ಪತ್ರವನ್ನು ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಕಳುಹಿಸಲಾಗಿತ್ತು. ಅದು ನಿಜವೆಂದು ತಿಳಿದ ಸಚಿವ, ಕಡತವನ್ನು ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗೂ ಸೂಚನೆ ನೀಡಿದ್ದರು.’

ADVERTISEMENT

‘ಶಿಫಾರಸು ಪತ್ರದ ವಿಷಯ ಇತ್ತೀಚೆಗೆ ಶಾಸಕರಿಗೆ ಗೊತ್ತಾಗಿತ್ತು. ಪತ್ರದಲ್ಲಿದ್ದ ಸಹಿ ನೋಡಿದಾಗ ನಕಲಿ ಎಂಬುದು ತಿಳಿಯಿತು. ಬಳಿಕವೇ ಅವರು ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸಂಬಂಧಪಟ್ಟ ಕಡತದಲ್ಲಿ ಸಚಿವರಾದ ಸಿ.ಸಿ.ಪಾಟೀಲ, ಸಿ.ಟಿ.ರವಿ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಹೆಸರಿನಲ್ಲೂ ಶಿಫಾರಸು ಪತ್ರಗಳು ಇವೆ. ಅವುಗಳ ನೈಜತೆಯನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.