ADVERTISEMENT

ಶಿಕ್ಷಣ ಇಲಾಖೆಗೆ ನಕಲಿ ದಾಖಲೆ ಸಲ್ಲಿಕೆ: ಎಫ್ಐಆರ್‌

ಹಲಸೂರು ಗೇಟ್ ಠಾಣೆ ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 14:33 IST
Last Updated 30 ಜುಲೈ 2025, 14:33 IST
<div class="paragraphs"><p>FIR</p></div>

FIR

   

– ಕಡತ ಚಿತ್ರ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಆರೋಪದ ಅಡಿ ತ್ಯಾಗರಾಜನಗರದ ಬಿಜಿಎಸ್‌ ಬ್ಲೂಮ್‌ ಫೀಲ್ಡ್ ಶಾಲೆಯ ಮುಖ್ಯಸ್ಥ ಬಿ.ಗುರಪ್ಪನಾಯ್ಡು ಹಾಗೂ ಅವರ ಪತ್ನಿ, ಸಂಸ್ಥೆಯ ಟ್ರಸ್ಟಿ ಸುನಿತಾ ಅವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ವಕೀಲೆ ಸುಧಾ ಕಟ್ವಾ ಅವರು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಗುರಪ್ಪನಾಯ್ಡು ಹಾಗೂ ಸುನಿತಾ ಅವರು 2020ರಲ್ಲಿ ಶಾಲೆ ಆರಂಭಿಸಿದ್ದರು. ಶಿಕ್ಷಕರು ಹಾಗೂ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಿಬಿಎಂಪಿಯಿಂದ ಕಟ್ಟಡದ ಕಾಮಗಾರಿ ಪೂರ್ಣಗೊಂಡಿರುವ ಕುರಿತು ಹಾಗೂ ಕಟ್ಟಡದ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು ಕಡ್ಡಾಯ. ಗುರಪ್ಪನಾಯ್ಡು ಹಾಗೂ ಸುನಿತಾ ಅವರು ಕಟ್ಟಡ ಕಾಮಗಾರಿ ಮುಕ್ತಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿದ್ದರು. ಕೆಂಗೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್(ರಾಜರಾಜೇಶ್ವರಿನಗರ ವಲಯ) 2021ರ ನವೆಂಬರ್ 3ರಂದು ಪ್ರಮಾಣ ಪತ್ರ ನೀಡಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ’ ಎಂದು ಸುಧಾ ಅವರು ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಗುರಪ್ಪನಾಯ್ಡು ಹಾಗೂ ಸುನಿತಾ ಮತ್ತಿತರರು ಒಳಸಂಚು ರೂಪಿಸಿ ಸಾರ್ವಜನಿಕರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿ ನಕಲಿ ದಾಖಲೆಗಳನ್ನು ನೈಜ ದಾಖಲೆಗಳೆಂದು ಸರ್ಕಾರಿ ಕಚೇರಿಗೆ ಸಲ್ಲಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.