ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಜಾಲ ಪತ್ತೆ; ಮಹಿಳೆಯರು ಸೇರಿ ಐವರ ಬಂಧನ

ವಿದ್ಯಾರಣ್ಯಪುರ ಪೊಲೀಸರ ತನಿಖೆ | ಮಹಿಳೆಯರು ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2022, 19:30 IST
Last Updated 20 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಖಾಲಿ ನಿವೇಶನಗಳ ಮೇಲೆ ಕಣ್ಣಿಟ್ಟು ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ವಿದ್ಯಾರಣ್ಯಪುರ ಪೊಲೀಸರು ಭೇದಿಸಿದ್ದು, ಮಹಿಳೆಯರು ಸೇರಿ ಐವರನ್ನು ಬಂಧಿಸಿದ್ದಾರೆ.

‘ಆರ್‌.ಟಿ.ನಗರ ಎಲ್‌.ಆರ್.ಬಂಡೆ ನಿವಾಸಿ ಫೈಜ್ ಸುಲ್ತಾನ್ ಅಲಿಯಾಸ್ ಷರ್ಲಿ ಜೋಸ್ (33), ಪೂಜಾ ಅಲಿಯಾಸ್ ವೈಶಾಲಿ (26), ಜಯಮ್ಮ ಅಲಿಯಾಸ್ ಎಂ. ಕಲ್ಪನಾ (50), ಸಹಕಾರ ನಗರದ ಕಬೀರ್ ಅಲಿ ಅಲಿಯಾಸ್ ಬಾಬು (34) ಹಾಗೂ ಜಗದೀಶ್ ಅಲಿಯಾಸ್ ಯೋಗೇಶ್ (40) ಬಂಧಿತರು. ಇವರಿಂದ 102 ಗ್ರಾಂ ಚಿನ್ನಾಭರಣ, ₹ 2.97 ಲಕ್ಷ ನಗದು, ಕಾರು, ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತಾ ಪುಸ್ತಕ ಹಾಗೂ ಕೆಲ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಹೇಳಿದರು.

‘ನರಸೀಪುರ ಗ್ರಾಮದ ಎಚ್‌ಎಂಟಿ ಬಡಾವಣೆಯಲ್ಲಿರುವ ನಿವೇಶನವನ್ನು (ನಂ. 815) ಡಿ. ಸುವರ್ಣಮ್ಮ ಎಂಬುವರಿಗೆ ಹಂಚಿಕೆ ಮಾಡಲಾಗಿತ್ತು. ನಿವೇಶನ ಖಾಲಿ ಇರುವುದನ್ನು ಗಮನಿಸಿದ್ದ ಆರೋಪಿಗಳು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗವನ್ನು ಮಾರಾಟ ಮಾಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಸುವರ್ಣಮ್ಮ ಅವರು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಫೈಜ್ ಸುಲ್ತಾನ್ ಎಂಬಾಕೆ, ಸ್ನೇಹಿತ ಕಬೀರ್ ಅಲಿ ಜೊತೆ ಸೇರಿ ಕೃತ್ಯ ಎಸಗಿದ್ದಳು. ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡಳು. ಆಕೆ ನೀಡಿದ್ದ ಮಾಹಿತಿಯಂತೆ ಉಳಿದ ಆರೋಪಿಗಳನ್ನೂ ಸೆರೆ ಹಿಡಿಯಲಾಯಿತು’ ಎಂದೂ ವಿವರಿಸಿದರು.

ಖಾಲಿ ನಿವೇಶನ ಹುಡುಕಾಡಿ ಕೃತ್ಯ: ‘ಆರೋಪಿ ಕಬೀರ್ ಅಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಖಾಲಿ ನಿವೇಶನಗಳನ್ನು ಹುಡುಕಾಡುತ್ತಿದ್ದ. ಅಕ್ಕ–ಪಕ್ಕದ ಜನರಲ್ಲಿ ವಿಚಾರಿಸಿ, ಮಾಲೀಕರ ಹೆಸರು ಹಾಗೂ ವಿಳಾಸ ತಿಳಿದುಕೊಳ್ಳುತ್ತಿದ್ದ’ ಎಂದು ಡಿಸಿಪಿ ಅನೂಪ್ ಹೇಳಿದರು.

‘ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಜೊತೆ ಒಡನಾಟವಿಟ್ಟುಕೊಂಡಿದ್ದ ಆರೋಪಿ, ಅವರ ಮೂಲಕ ನಿವೇಶನಗಳ ದಾಖಲೆಗಳನ್ನು ಪಡೆಯುತ್ತಿದ್ದ. ಅದೇ ದಾಖಲೆಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಇತರೆ ಆರೋಪಿಗಳನ್ನೇ ಮಾಲೀಕರಂತೆ ಬಿಂಬಿಸುತ್ತಿದ್ದ. ಗ್ರಾಹಕರನ್ನು ಹುಡುಕಿತಂದು ಅವರಿಗೆ ಜಾಗ ಮಾರುತ್ತಿದ್ದ. ನಂತರ, ಅಸಲಿ ಮಾಲೀಕರು ಹಾಗೂ ನಕಲಿ ಮಾಲೀಕರ ನಡುವೆ ವ್ಯಾಜ್ಯವಾಗುತ್ತಿತ್ತು. ಆರೋಪಿ ಕಬೀರ್, ಹಣ ಪಡೆದು ನಾಪತ್ತೆಯಾಗುತ್ತಿದ್ದ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.