ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಟ್ರ್ಯಾಕ್ಟರ್‌ ಮಾರಾಟ; ಮತ್ತೆ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 14:36 IST
Last Updated 29 ಡಿಸೆಂಬರ್ 2020, 14:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಟ್ರ್ಯಾಕ್ಟರ್‌ಗಳನ್ನು ಕದ್ದು ಅವುಗಳನ್ನು ರೈತರಿಗೆ ಬಾಡಿಗೆ ನೀಡುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದಡಿ ಮಂಡ್ಯದ ಬೋರೇಗೌಡ (48) ಎಂಬುವರನ್ನು ಬಂಧಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು, ಇದೀಗ ಮತ್ತೆ ಐವರನ್ನು ಸೆರೆ ಹಿಡಿದಿದ್ದಾರೆ.

‘ಆನಂದ್, ಯಾಕೂಬ್ ಖಾನ್, ಲಿಂಗಪ್ಪ, ಕೆ. ಲೋಕೇಶ್ ಹಾಗೂ ವಿ. ಲೋಕೇಶ್ ಬಂಧಿತರು. ಈ ಐವರು ಆರೋಪಿಗಳು, ಪ್ರಮುಖ ಆರೋಪಿ ಬೋರೇಗೌಡ ಜೊತೆ ಸೇರಿ ಕೃತ್ಯ ಎಸಗುತ್ತಿದ್ದರು. ಈ ಗ್ಯಾಂಗ್‌ನಿಂದ ₹ 55 ಲಕ್ಷ ಮೌಲ್ಯದ 2 ಟ್ರ್ಯಾಕ್ಟರ್, ಕಾರು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಟ್ರ್ಯಾಕ್ಟರ್‌ಗಳನ್ನು ಕಳವು ಮಾಡುತ್ತಿದ್ದರು. ಟ್ರ್ಯಾಕರ್‌ಗಳ ಎಂಜಿನ್ ನಂಬರ್ ಬದಲಾಯಿಸಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾದ ರೀತಿಯಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಹಾಗೂ ಮಂಡ್ಯ ಆರ್‌ಟಿಒ ಹೆಸರಿನಲ್ಲಿರುವ ನಕಲಿ ದಾಖಲೆಗಳು ಆರೋಪಿಗಳ ಬಳಿ ಸಿಕ್ಕಿವೆ’ ಎಂದೂ ಪೊಲೀಸರು ವಿವರಿಸಿದರು.

ADVERTISEMENT

‘ನಕಲಿ ದಾಖಲೆ ತೋರಿಸಿ ರೈತರನ್ನು ನಂಬಿಸುತ್ತಿದ್ದ ಆರೋಪಿಗಳು, ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡುತ್ತಿದ್ದರು. ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಯ ಕೆಲ ರೈತರು ಆರೋಪಿಗಳ ಬಳಿ ಟ್ರ್ಯಾಕ್ಟರ್‌ ಖರೀದಿಸಿದ್ದರು’ ಎಂದೂ ಹೇಳಿದರು.

‘ಪೀಣ್ಯ, ಬ್ಯಾಡರಹಳ್ಳಿ, ಜ್ಞಾನಭಾರತಿ, ಮಾದನಾಯಕನಹಳ್ಳಿ, ಬಿಡದಿ, ಕುಣಿಗಲ್ ಹಾಗೂ ಇತರೆ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.