ADVERTISEMENT

ಶಾಸಕರ ಹೆಸರಿನಲ್ಲಿ ವಂಚನೆ; ನಕಲಿ ಗನ್‌ಮ್ಯಾನ್ ಬಂಧನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 16:25 IST
Last Updated 2 ಫೆಬ್ರುವರಿ 2021, 16:25 IST
ಆರೋಪಿ ನಾರಾಯಣ
ಆರೋಪಿ ನಾರಾಯಣ   

ಬೆಂಗಳೂರು: ಶಾಸಕರೊಬ್ಬರ ಗನ್‌ಮ್ಯಾನ್ ಎಂದು ಹೇಳಿಕೊಂಡು ಸರ್ಕಾರಿ ಕೆಲಸದ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ನಾರಾಯಣ (30) ಎಂಬಾತನನ್ನು ಉ‍ಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಶಿರಸಿಯ ನಾರಾಯಣ ನಕಲಿ ಗನ್‌ಮ್ಯಾನ್. ಆತನಿಂದ ನಕಲಿ ಪಿಸ್ತೂಲ್ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಗನ್‌ಮ್ಯಾನ್ ರೀತಿಯಲ್ಲಿ ಸಫಾರಿ ಬಟ್ಟೆ ಹಾಕಿಕೊಳ್ಳುತ್ತಿದ್ದ ಆರೋಪಿ, ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ. ಪೊಲೀಸರು ಹಾಗೂ ಪೊಲೀಸ್ ಇಲಾಖೆ ವಾಹನಗಳ ಎದುರು ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದ. ಅದೇ ಫೋಟೊಗಳನ್ನೇ ಅಭ್ಯರ್ಥಿಗಳಿಗೆ ತೋರಿಸಿ, ತಾನು ಶಾಸಕರ ಗನ್‌ಮ್ಯಾನ್ ಎಂದು ಹೇಳಿ ನಂಬಿಸುತ್ತಿದ್ದ’ ಎಂದೂ ತಿಳಿಸಿದರು.

ADVERTISEMENT

ಫೇಸ್‌ಬುಕ್‌ನಲ್ಲಿ ಪರಿಚಯ:‘ಆರೋಪಿಯಿಂದ ವಂಚನೆಗೀಡಾಗಿದ್ದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಆತ ಮತ್ತಷ್ಟು ಮಂದಿಗೆ ವಂಚನೆ ಮಾಡಿರುವ ಮಾಹಿತಿಯೂ ಇದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರನ್ನು ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿ, ಹಲವು ದಿನ ಮಾತುಕತೆ ನಡೆಸಿದ್ದ. ವ್ಯಕ್ತಿಗೆ ಕೆಲಸದ ಆಮಿಷವೊಡ್ಡಿದ್ದ ಆರೋಪಿ, ‘ನಾನು ದಾವಣಗೆರೆ ಶಾಸಕರೊಬ್ಬರ ಗನ್‌ಮ್ಯಾನ್. ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ನನಗೆ ಬಹಳ ಪರಿಚಯ. ಅವರ ಮೂಲಕ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದೇನೆ. ಆದರೆ, ಅದಕ್ಕೆ ಹಣ ಖರ್ಚಾಗುತ್ತದೆ’ ಎಂದಿದ್ದ.’

‘ಆರೋಪಿ ಮಾತು ನಂಬಿದ್ದ ದೂರುದಾರ, ಹಣ ನೀಡಲು ಒಪ್ಪಿಕೊಂಡಿದ್ದರು. ಸೋಮವಾರ ಸಂಜೆ ದೂರುದಾರರನ್ನು ದಾವಣಗೆರೆಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ ಆರೋಪಿ, ₹ 30 ಸಾವಿರ ಪಡೆದಿದ್ದ. ನಂತರ ಮನೆಯಲ್ಲೇ ಊಟ ಮಾಡಿ ರಾತ್ರಿಯೇ ಇಬ್ಬರೂ ಬೆಂಗಳೂರಿನತ್ತ ಹೊರಟಿದ್ದರು. ಮಂಗಳವಾರ ನಸುಕಿನಲ್ಲಿ ಬೆಂಗಳೂರು ತಲುಪಿದ್ದರು.’

‘ಆರೋಪಿ ಸುಳ್ಳು ಹೇಳಿದ್ದನೆಂಬುದು ದೂರುದಾರರಿಗೆ ಗೊತ್ತಾಗಿತ್ತು. ಅದನ್ನು ಪ್ರಶ್ನಿಸಿದ್ದ ಅವರು, ಹಣ ವಾಪಸು ನೀಡುವಂತೆ ಹೇಳಿದ್ದರು. ಆದರೆ, ಆರೋಪಿ ಕೊಟ್ಟಿರಲಿಲ್ಲ. ಬಳಿಕ ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.