ADVERTISEMENT

ನಕಲಿ ಅಂಕಪಟ್ಟಿ ಜಾಲ; ರಾಜ್ಯದ ಸಿಸಿಬಿ ಪೊಲೀಸರಿಂದ ಪಂಜಾಬ್‌ನ ದಂಪತಿ ಸೆರೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 9:55 IST
Last Updated 13 ಆಗಸ್ಟ್ 2021, 9:55 IST
ನಕಲಿ ಅಂಕಪಟ್ಟಿ–ಪ್ರಾತಿನಿಧಿಕ ಚಿತ್ರ
ನಕಲಿ ಅಂಕಪಟ್ಟಿ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಪಂಜಾಬ್‌ನ ಮುಖೇಶ್ ಹಾಗೂ ಪತ್ನಿ ರೋಹಿ ಬಂಧಿತರು. ಅವರಿಂದ ನಕಲಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಹಾಗೂ ಸ್ಥಿರಾಸ್ತಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ದಂಪತಿ, ಪೀಣ್ಯ ಬಳಿ ಶೈಕ್ಷಣಿಕ ಸಂಸ್ಥೆಯೊಂದನ್ನು ತೆರೆದಿದ್ದರು. ಐಟಿಐ ಹಾಗೂ ಇತರೆ ಕೋರ್ಸ್‌ಗಳಿಗೆ ತರಬೇತಿ ನೀಡುವುದಾಗಿ ಹೇಳುತ್ತಿದ್ದರು. ಸಂಸ್ಥೆ ಹೆಸರಿನಲ್ಲಿ ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಪಿಯುಸಿ ಉತ್ತೀರ್ಣರಾದ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಪರೀಕ್ಷೆ ಬರೆಯದೇ ಅಂಕಪಟ್ಟಿ ನೀಡುವುದಾಗಿ ಹೇಳುತ್ತಿದ್ದರು. ಸಾವಿರದಿಂದ ಲಕ್ಷಾಂತರ ರೂಪಾಯಿ ಪಡೆದು ನಕಲಿ ಅಂಕಪಟ್ಟಿ ಮಾರುತ್ತಿದ್ದರು.’

‘ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಬಿ.ಟೆಕ್, ಎಂ.ಟೆಕ್, ಎಂ.ಬಿ.ಎ, ಬಿ.ಕಾಮ್ ಹಾಗೂ ಇತರೆ ಕೋರ್ಸ್‌ಗಳ ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ಮಾರಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ 500ಕ್ಕೂ ಹೆಚ್ಚು ಮಂದಿ ಅಂಕಪಟ್ಟಿ ಖರೀದಿಸಿದ್ದಾರೆ. ಅದೇ ಅಂಕಪಟ್ಟಿ ಬಳಸಿ ಹಲವರು ಖಾಸಗಿ ಹಾಗೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.

ಮನೆ, ಕಚೇರಿ ಮೇಲೆ ದಾಳಿ: ‘ಆರೋಪಿಗಳ ಕೃತ್ಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಯಿತು. ನಕಲಿ ಅಂಕಪಟ್ಟಿಗಳೂ ಪತ್ತೆಯಾದವು. ದಂಪತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದೂ ಪೊಲೀಸರು ತಿಳಿಸಿದರು.

‘ಸಿ.ವಿ. ರಾಮನ್ ವಿಶ್ವವಿದ್ಯಾಲಯ, ರವೀಂದ್ರನಾಥ್ ಠಾಗೋರ್ ವಿಶ್ವವಿದ್ಯಾಲಯ, ಅಸೆಟ್ ವಿಶ್ವವಿದ್ಯಾಲಯ ಸೇರಿ ಹಲವು ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೂ ಮಾಹಿತಿ ನೀಡಲಾಗುವುದು’ ಎಂದೂ ಹೇಳಿದರು.

'ನಕಲಿ ಅಂಕಪಟ್ಟಿ ತಯಾರಿಕೆಯಲ್ಲಿ ಆರೋಪಿಗಳ ಜೊತೆ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.