ADVERTISEMENT

‘ಹನಿಟ್ರ್ಯಾಪ್‌’ ದಂಧೆ; ನಕಲಿ ಪೊಲೀಸ್ ಸೆರೆ

ಸಾಫ್ಟ್‌ವೇರ್ ಉದ್ಯೋಗಿಗೆ ಗಾಳ ಹಾಕಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 19:51 IST
Last Updated 20 ಜೂನ್ 2018, 19:51 IST

ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನು ‘ಹನಿಟ್ರ್ಯಾಪ್’ ಜಾಲದಲ್ಲಿ ಸಿಲುಕಿಸಿ, ₹ 20 ಸಾವಿರ ಸುಲಿಗೆ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿಯೊಬ್ಬ ಮಾರತ್ತಹಳ್ಳಿ ಠಾಣೆಯ ಅತಿಥಿಯಾಗಿದ್ದಾನೆ.

‘ರಾಜು (32) ಎಂಬಾತನನ್ನು ಬಂಧಿಸಿದ್ದೇವೆ. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಮಹಿಳೆಯರಿಗಾಗಿ ಶೋಧ ನಡೆಯುತ್ತಿದೆ. ಈ ಗ್ಯಾಂಗ್ ಇನ್ನೂ ಹಲವು ಮಂದಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಮಹಿಳೆಯೇ ಸೂತ್ರಧಾರಿ: ಜೂನ್ 8ರಂದು ಫಿರ್ಯಾದಿಯನ್ನು ಸಂಪರ್ಕಿಸಿದ್ದ ಮಹಿಳೆ, ‘ಯಾವುದಾದರೂ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದರೆ, ನಿಮ್ಮ ಜತೆ ಒಂದು ದಿನ ಕಳೆಯುತ್ತೇನೆ’ ಎಂದಿದ್ದಳು. ಅದಕ್ಕೆ ಒಪ್ಪಿದ ಫಿರ್ಯಾದಿ, ಐಟಿಪಿಎಲ್ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಜೂನ್ 9ರಂದು ರೂಮ್ ಬುಕ್ ಮಾಡಿದ್ದರು. ಅದೇ ದಿನ ಸಂಜೆ ಮಹಿಳೆ ಜತೆ ಹೋಟೆಲ್‌ಗೆ ತೆರಳಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಫಿರ್ಯಾದಿ ಜತೆ ಸ್ವಲ್ಪ ಸಮಯ ಕಳೆದ ಮಹಿಳೆ, ‘ಒಂದು ಬಕ್ರಾ ಸಿಕ್ಕಿದೆ. ಆದಷ್ಟು ಬೇಗನೆ ಬನ್ನಿ’ ಎಂದು ತನ್ನ ಗ್ಯಾಂಗ್ ಸದಸ್ಯರಿಗೆ ಸಂದೇಶ ರವಾನಿಸಿದ್ದಳು. ಹೋಟೆಲ್‌ನ ವಿಳಾಸವನ್ನೂ ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಮಾಡಿದ್ದಳು.

ರಾತ್ರಿ 1.30ರ ಸುಮಾರಿಗೆ ಕೊಠಡಿಯ ಬಾಗಿಲು ಬಡಿದ ರಾಜು, ಫಿರ್ಯಾದಿ ಬಳಿ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ‘ಆಕೆ ನಿಮ್ಮ ಪತ್ನಿಯೇ’ ಎಂದೂ ಪ್ರಶ್ನಿಸಿದ್ದಾನೆ. ‘ನಾವಿಬ್ಬರೂ ಸಂಬಂಧಿಗಳು. ಮುಂದೆ ಮದುವೆ ಆಗುವವರು’ ಎಂದು ಅವರು ಹೇಳುತ್ತಿದ್ದಂತೆಯೇ ಪೊಲೀಸ್ ಶೈಲಿಯಲ್ಲೇ ಕೂಗಾಡಿದ್ದಾನೆ.

‘₹50,000 ಕೊಡದಿದ್ದರೆ, ಮಾಧ್ಯಮದವರನ್ನು ಕರೆಸುತ್ತೇನೆ. ನಿಮ್ಮಿಬ್ಬರ ಖಾಸಗಿ ಕ್ಷಣದ ವಿಡಿಯೊ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿ ಮರ್ಯಾದೆ ತೆಗೆಯುತ್ತೇನೆ’ ಎಂದೂ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

ಇದರಿಂದ ಅಂಜಿದ ಫಿರ್ಯಾದಿ, ಆರೋಪಿಯ ಕಾರಿನಲ್ಲೇ ಮಾರತ್ತಹಳ್ಳಿಯ ಕಲಾಮಂದಿರದ ಬಳಿ ತೆರಳಿ ಎಟಿಎಂನಿಂದ ₹ 20 ಸಾವಿರ ಡ್ರಾ ಮಾಡಿ ಕೊಟ್ಟಿದ್ದಾರೆ. ನಂತರ ಅವರನ್ನು ಕೆ.ಆರ್.ಪುರ ಬಸ್ ನಿಲ್ದಾಣದ ಬಳಿ ಕಾರಿನಿಂದ ಇಳಿಸಿ, ಆರೋಪಿ ಹೊರಟು ಹೋಗಿದ್ದಾನೆ.

ಮರುದಿನ ಪುನಃ ಕರೆ ಮಾಡಿರುವ ಆತ, ಬಾಕಿ ₹ 30,000 ಕೊಡುವಂತೆ ಪೀಡಿಸಲು ಶುರು ಮಾಡಿದ್ದಾನೆ. ಆಗ ಫಿರ್ಯಾದಿ ಮಾರತ್ತಹಳ್ಳಿ ಠಾಣೆಯ ಮೆಟ್ಟಿಲೇರಿದ್ದಾರೆ. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಪೊಲೀಸರು ರಾಜುನನ್ನು ವಶಕ್ಕೆ ಪಡೆದಿದ್ದಾರೆ. ಹೋಟೆಲ್ ನೌಕರರ ಪಾತ್ರವಿದೆಯೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.