ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೋಂದಣಿ ಮಾಡಿಸಿ ನೂರಾರು ಗ್ರಾಹಕರಿಗೆ ವಂಚಿಸಿದ ಆರೋಪದಡಿ ಬಿಟಿಎಂ ಲೇಔಟ್‌ನ ಹಿಂದಿನ ಉಪ ನೋಂದಣಾಧಿಕಾರಿ ಸೇರಿ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನ ಹಿಂದಿನ ಉಪ ನೋಂದಣಾಧಿಕಾರಿ ರೂಪಾ(40) ಮತ್ತು ಚಂದಾಪುರ ನಿವಾಸಿ, ನವಯುಗ ಪ್ರಾಪರ್ಟಿಸ್ ಪಾಲುದಾರ ನವೀನ್ ಕುಮಾರ್(36) ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳು, ಇತರೆ 38 ಮಂದಿ ಜತೆ ಸೇರಿಕೊಂಡು ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿ ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂಬರ್ 5/2ರಲ್ಲಿರುವ 40ಕ್ಕೂ ಹೆಚ್ಚು ನಿವೇಶನಗಳನ್ನು ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಈ ಪೈಕಿ ಎರಡು ನಿವೇಶನಗಳ ಮಾಲೀಕರು ಇಲ್ಲದಿದ್ದರೂ ನಕಲಿ ನೋಂದಣಿ ಆಗಿತ್ತು. ಈ ಸಂಬಂಧ 2022ರಲ್ಲಿ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಆರೋಪಿಗಳಾದ ನವೀನ್, ವೆಂಕಟೇಶ್ ನಾಯ್ಡು ಮತ್ತು ಇತರರು ನವಯುಗ ಪ್ರಾಪರ್ಟಿಸ್ ಎಂಬ ಸಂಸ್ಥೆ ತೆರೆದು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಈ ಮಧ್ಯೆ ದೂರುದಾರ ಮುಕುಂದ ಎಂಬುವರಿಗೆ ಸೇರಿದ್ದ ಜಮೀನಿಗೆ ಸಂಬಂಧಿಸಿದಂತೆ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕ್ರಯ ಪತ್ರ ಮಾಡಿದ್ದರು. ಮುಕುಂದ ಅವರ ತಂದೆ ನಾಗರಾಜ್ ಶೆಟ್ಟಿ ಹೆಸರಿನಲ್ಲಿದ್ದ ಈ ಜಮೀನನ್ನು, ಗಣೇಶ್ ಎಂಬಾತ ತಾನೇ ನಾಗರಾಜ್ ಶೆಟ್ಟಿ ಪುತ್ರ ಎಂದು ಬಿಂಬಿಸಿ ಅಕ್ರಮವಾಗಿ ಕ್ರಯ ಪತ್ರ ಮಾಡಿಸಿದ್ದ. ಆದರೆ, ಅಸಲಿಗೆ ನಾಗರಾಜ್ ಶೆಟ್ಟಿ ಅವರಿಗೆ ಗಣೇಶ್ ಎಂಬ ಮಗ ಇರಲಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ತನ್ನ ಹೆಸರಿಗೆ ಕ್ರಯಪತ್ರ ಮಾಡಿಸಿಕೊಂಡಿದ್ದ ಜಮೀನನ್ನು ಗಣೇಶ್, ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದರು. ಆ ವ್ಯಕ್ತಿ ಜಮೀನಿನ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವಿಚಾರ ತಿಳಿದ ಮುಕುಂದ, ಸ್ಥಳಕ್ಕೆ ತೆರಳಿ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ಗಣೇಶ್ ಎಂಬುವರಿಂದ ಜಮೀನು ಖರೀದಿಸಿದ್ದಾಗಿ ಹೇಳಿದ್ದಾರೆ. ಮೋಸ ಹೋಗಿರುವುದನ್ನು ಅರಿತ ಮುಕುಂದ, 2022ರಲ್ಲಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ 40 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸುಮಾರು ಎರಡು ವರ್ಷಗಳ ನಂತರ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.