ADVERTISEMENT

ಪತಿಯಿಂದ ದೂರವಿದ್ದು ಭೌತಿಕ ಅಂತರ ಕಾಯ್ದುಕೊಳ್ಳುವುದು ಕ್ರೌರ್ಯ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 14:47 IST
Last Updated 14 ಡಿಸೆಂಬರ್ 2024, 14:47 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಪತಿಯಿಂದ ಎಂಟು ವರ್ಷ ದೂರವಿದ್ದು ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆತನನ್ನು ವೈವಾಹಿಕ ಸುಖದಿಂದ ವಂಚಿಸುವ ಪತ್ನಿಯ ನಡೆಯೂ ಕ್ರೌರ್ಯಕ್ಕೆ ಸಮಾನ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಪತಿಯಿಂದ ದೂರ ಉಳಿದಿದ್ದ ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದೆ.

ಈ ಸಂಬಂಧ 41 ವರ್ಷದ ಪತಿ ಸಲ್ಲಿಸಿದ್ದ ಮೊದಲ ಮೇಲ್ಮನವಿಯನ್ನು‌ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

ಸ್ಥಳೀಯ ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಛೇದನ ಡಿಕ್ರಿ ಮಂಜೂರು ಮಾಡದೆ ಹೋದ ಆದೇಶವನ್ನು ರದ್ದುಪಡಿಸಿದೆ.

ADVERTISEMENT

‘ಈ ಪ್ರಕರಣದಲ್ಲಿನ 38 ವರ್ಷದ ಪತ್ನಿಯು ತಮ್ಮ ಪತಿಗೆ ತಿಳಿಸದೇ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿರುವುದು ಕ್ರೌರ್ಯಕ್ಕೆ ಸಮಾನವಾಗಿದ್ದು, ಈ ಆಧಾರದಲ್ಲಿ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.

‘ಅರ್ಜಿದಾರರ ಪತ್ನಿಯು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಸ್ವಂತ ಆದಾಯವಿದೆ. ಪ್ರಕರಣದಲ್ಲಿ ಅವರು ತಮ್ಮ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯದ ಮುಂದೆಯೂ ಬಂದಿಲ್ಲ. ಹೀಗಾಗಿ, ಅವರಿಗೆ ಶಾಶ್ವತ ಜೀವನಾಂಶ ನೀಡಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಅರ್ಜಿದಾರರು ತಮ್ಮ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳಲು ಸಿದ್ಧರಿದ್ದಾರೆ. ಅದಕ್ಕಾಗಿ ನ್ಯಾಯಾಲಯ ನಿರ್ಧರಿಸಿರುವ ಮೊತ್ತವನ್ನು ಠೇವಣಿ ಇರಿಸುವುದಕ್ಕೂ ತಯಾರಿದ್ದಾರೆ. ಈ ಮೊತ್ತವನ್ನು ಮಕ್ಕಳ ಜೀವನಾಂಶ ಮತ್ತು ಅವರ ಭವಿಷ್ಯದ ಶಿಕ್ಷಣಕ್ಕೆ ಬಳಸಬಹುದಾಗಿದೆ. ಹೀಗಾಗಿ, ಇಬ್ಬರೂ ಮಕ್ಕಳ ಹೆಸರಿನಲ್ಲಿ ತಲಾ ₹10 ಲಕ್ಷ ಮೊತ್ತವನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು’ ಎಂದು ಮೇಲ್ಮನವಿದಾರ ಪತಿಗೆ ನಿರ್ದೇಶಿಸಿದೆ.

‘ಈ ಮೊತ್ತವನ್ನು ಮಕ್ಕಳು ತಾವು ಪ್ರೌಢಾವಸ್ಥೆಗೆ ತಲುಪಿದ ಬಳಿಕ ಪಡೆದುಕೊಳ್ಳಬಹುದಾಗಿದೆ’ ಎಂದೂ ನ್ಯಾಯಪೀಠ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.