ADVERTISEMENT

ರೈಲು ನಿಲ್ದಾಣದಲ್ಲಿ ಬೀದರ್ ರೈತರು ಪೊಲೀಸರ ವಶಕ್ಕೆ

ಮುಖ್ಯಮಂತ್ರಿ ಭೇಟಿಯಾಗಲು ಬಂದಿದ್ದ ಅನ್ನದಾತರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:35 IST
Last Updated 2 ಮಾರ್ಚ್ 2020, 19:35 IST

ಬೆಂಗಳೂರು: ‘ಮುಳುಗಡೆ ಆಗಿರುವ ಗ್ರಾಮಗಳ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಸೋಮವಾರ ನಗರಕ್ಕೆ ಬಂದಿದ್ದ ಬೀದರ್‌ನ ರೈತರನ್ನು ಯಶವಂತಪುರ ರೈಲು ನಿಲ್ದಾಣದಲ್ಲೇ ಪೊಲೀಸರು ವಶಕ್ಕೆ ಪಡೆದರು.

ಬೀದರ್‌ನಿಂದ ರಾತ್ರಿ ಹೊರಟಿದ್ದ ರೈತರು ಬೆಳಿಗ್ಗೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಉತ್ತರ ವಿಭಾಗದ ಪೊಲೀಸರು, 50ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಇರಿಸಿದ್ದರು.

‘ನಮಗಾದ ಅನ್ಯಾಯಕ್ಕೆ ನ್ಯಾಯ ಕೇಳಲು ರಾಜಧಾನಿಗೆ ಬಂದಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಇಲ್ಲಿಯೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇವೆ. ಪೊಲೀಸರು ನಮ್ಮನ್ನು ನಿಲ್ದಾಣದಲ್ಲೇ ತಡೆದು ವಶಕ್ಕೆ ಪಡೆದಿದ್ದಾರೆ. ರೈತರು ನ್ಯಾಯ ಕೇಳಲು ರಾಜಧಾನಿಗೆ ಬಂದಿದ್ದೇ ತಪ್ಪಾ’ ಎಂದು ಪ್ರಶ್ನಿಸಿದರು.

ADVERTISEMENT

ಪೊಲೀಸರು, ‘ವಿಧಾನಸೌಧಕ್ಕೆ ಮತ್ತಿಗೆ ಹಾಕುವ ಉದ್ದೇಶದಿಂದ ರೈತರು ನಗರಕ್ಕೆ ಬಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಎಕರೆಗೆ ₹3 ಸಾವಿರ ಪರಿಹಾರ:ರೈತ ಮುಖಂಡ ಚಂದ್ರಶೇಖರ್ ಪಾಟೀಲ ಮಾತನಾಡಿ, ‘ಬೀದರ್‌ನ ಕಾರಂಜಾ ಜಲಾಶಯದಿಂದ 7 ಹಳ್ಳಿಗಳು ಮುಳುಗಡೆ ಆಗಿವೆ. 1982ರಲ್ಲಿ ಪ್ರತಿ ಎಕರೆಗೆ ಕೇವಲ ₹ 3 ಸಾವಿರ ಪರಿಹಾರ ಕೊಡಲಾಗಿದೆ. ಕೆಲ ರೈತರು, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪ್ರತಿ ಎಕರೆಗೆ ₹ 12 ಲಕ್ಷ ಪರಿಹಾರ ಪಡೆದುಕೊಂಡಿದ್ದಾರೆ’ ಎಂದರು.

’ಪ್ರತಿ ಎಕರೆಗೆ ₹ 20 ಲಕ್ಷ ನಿಗದಿಪಡಿಸಿ,ಎಲ್ಲ ರೈತರಿಗೂ ಸಮ ಪ್ರಮಾಣದಲ್ಲಿ ಪರಿಹಾರ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

’ಪರಿಹಾರದ ಭರವಸೆ ನೀಡಿದ್ದ ಹಿಂದಿನ ಸಮ್ಮಿಶ್ರ ಸರ್ಕಾರ ಕೊಟ್ಟ ಮಾತು ಈಡೇರಿಸಿಲ್ಲ. ಇಂದಿನ ಸರ್ಕಾರವಾದರೂ ನಮ್ಮ ನೋವಿಗೆ ಸ್ಪಂದಿಸಬೇಕು. ಜಮೀನು ಕಳೆದುಕೊಂಡು ಬೀದಿಗೆ ಬಂದಿರುವ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.