ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ಶಾಖೆಯ ವತಿಯಿಂದ ಸೋಮನಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಮೈಗೆ ಸಗಣಿ ಹಚ್ಚಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
–ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಕನಕಪುರ ರಸ್ತೆಯ ಸೋಮನಹಳ್ಳಿ ಟೋಲ್ ಬಳಿ ಸರ್ವೀಸ್ ರಸ್ತೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ಶಾಖೆಯ ಸದಸ್ಯರು ಸೋಮನಹಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರೈತ ಮುಖಂಡರಾದ ನದೀಮ್ ಪಾಷ, ಸಿ. ಪುಟ್ಟಸ್ವಾಮಿ ಸೇರಿದಂತೆ ಕಗ್ಗಲಿಪುರ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಲ ರೈತರು ಮೈಗೆ ಸಗಣಿ ಹಚ್ಚಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಬಗರ್ ಹುಕುಂ ಸಾಗುವಳಿಯಲ್ಲಿ ರೈತರಿಗೆ ಮಂಜೂರಾದ ಕೃಷಿ ಜಮೀನನ್ನು ಸಕ್ರಮಗೊಳಿಸಿ ಪೋಡಿ, ದುರಸ್ತಿ ಮಾಡಿಕೊಡದೇ ರೈತರ ಹಕ್ಕನ್ನು ಕಸಿದುಕೊಳ್ಳುಲಾಗಿದೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಕಗ್ಗಲೀಪುರ, ಸಾಲುಹುಣಸೆ, ಉದಿಪಾಳ್ಯ ಗ್ರಾಮಗಳಿಗೆ ಬೈಪಾಸ್ ರಸ್ತೆಗಳಿಲ್ಲದೇ ಸ್ಥಳೀಯರು ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಇದನ್ನು ತಕ್ಷಣವೇ ಸರಿಪಡಿಸಬೇಕು. ಸಾಗುವಳಿ ರೈತರ ಮೇಲೆ ಅರಣ್ಯ ಇಲಾಖೆ ಮಾಡುತ್ತಿರುವ ದೌರ್ಜನ್ಯದಿಂದ ಮುಕ್ತಿ ನೀಡಬೇಕು. ಪಟ್ಟರೆಡ್ಡಿ ಪಾಳ್ಯ ಗ್ರಾಮಕ್ಕೆ ಪರ್ಯಾಯ ರಸ್ತೆ ನಿರ್ಮಿಸಲು ಅನುದಾನ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಸರ್ಕಾರ ಕೂಡಲೇ ಹಾಲು ಉತ್ಪಾದಕರ ಪ್ರೋತ್ಸಾಹ ಧನ ಬಿಡುಗಡೆಗೊಳಿಸಬೇಕು. ಸಾಕಮ್ಮ ಬಡಾವಣೆ ಅಧಿಕೃತಗೊಳಿಸಬೇಕು. ಬೋಳಾರೆ ಗ್ರಾಮದ ವಾಸಿಗಳಿಗೆ ಇ–ಸ್ವತ್ತು ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.