ADVERTISEMENT

ಸ್ಥಳೀಯರಿಗೆ ಹೊರೆಯಾದ ‘ಫಾಸ್ಟ್ಯಾಗ್‌’

ಟೋಲ್‌ಗಳಲ್ಲಿ ಎನ್‌ಎಚ್ಎಐನಿಂದ ಸಹಾಯ ಕೇಂದ್ರ: ದುಪ್ಪಟ್ಟು ಶುಲ್ಕಕ್ಕೆ ಆಕ್ರೋಶ, ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 2:55 IST
Last Updated 17 ಫೆಬ್ರುವರಿ 2021, 2:55 IST
ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ–4ರ ಹೆಬ್ಬಾಳು ಟೋಲ್ ಪ್ಲಾಜಾ ಬಳಿ ಮಂಗಳವಾರ ಸಿಬ್ಬಂದಿಯೊಬ್ಬರು ಫಾಸ್ಟ್ಯಾಗ್ ನೋಂದಣಿ ಮಾಡಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ–4ರ ಹೆಬ್ಬಾಳು ಟೋಲ್ ಪ್ಲಾಜಾ ಬಳಿ ಮಂಗಳವಾರ ಸಿಬ್ಬಂದಿಯೊಬ್ಬರು ಫಾಸ್ಟ್ಯಾಗ್ ನೋಂದಣಿ ಮಾಡಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಬೆಂಗಳೂರು: ಫಾಸ್ಟ್ಯಾಗ್‌ ಬಳಕೆಯ ಕಡ್ಡಾಯ ಜಾರಿ ಹಾಗೂ ಫಾಸ್ಟ್ಯಾಗ್ ಇಲ್ಲದಿದ್ದ ಸಂದರ್ಭದಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುವ ಆದೇಶ ವಿವಿಧೆಡೆ ಟೋಲ್‌ ಪ್ಲಾಜಾಗಳಲ್ಲಿ ವಾಹನ ಮಾಲೀಕರು, ಚಾಲಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಆಸುಪಾಸಿನ ರೈತರು, ಸ್ಥಳೀಯರಿಗೂ ವಿನಾಯಿತಿ ನೀಡಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಗೊಂದಲ ಬಗೆಹರಿಸುವ ಕ್ರಮವಾಗಿ ಹೆದ್ದಾರಿ ಪ್ರಾಧಿಕಾರವು ವಿವಿಧ ಟೋಲ್‌ಗಳಲ್ಲಿ ಸಹಾಯ ಕೇಂದ್ರ ತೆರೆದು ಫಾಸ್ಟ್ಯಾಗ್‌ ವಿತರಣೆಗೆ ಕ್ರಮವಹಿಸಿದೆ.

ಫಾಸ್ಟ್ಯಾಗ್‌ ನಿಯಮದಿಂದ ಚಿತ್ರದುರ್ಗ–ಹಿರಿಯೂರು ನಡುವೆ ಸೇವೆ ಒದಗಿಸುವ ಕ್ರೂಸರ್‌ ಮಾಲೀಕರು ಸಮಸ್ಯೆಗೆ ಸಿಲುಕಿದ್ದಾರೆ. ಶುಲ್ಕವನ್ನು ಡಿಜಿಟಲ್‌ ಸ್ವರೂಪದಲ್ಲಿ ವಸೂಲಿ ಮಾಡುವುದು ಸ್ಥಳೀಯರಿಗೆ ಹೊರೆಯಾಗಿ ಪರಿಣಮಿಸಿದೆ.

ADVERTISEMENT

ಕ್ರೂಸರ್‌ಗಳು ಮಾಸಿಕ ಪಾಸ್‌ ಪಡೆದು ಸಂಚರಿಸುತ್ತಿದ್ದವು. ಈಗ ನಿತ್ಯ ₹ 120 ಕೊಡಬೇಕಿದೆ. ಜಮೀನಿಗೆ ತೆರಳುವ ರೈತರಿಗೂ ವಿನಾಯಿತಿ ಸಿಕ್ಕಿಲ್ಲ. ಹಿರಿಯೂರು–ಚಿತ್ರದುರ್ಗ ನಡುವೆ ಸಂಚರಿಸುವ ವಾಹನ ಸವಾರರು ಈಗ ಮೇಟಿಕುರ್ಕೆ, ಸೂರಗೊಂಡನಹಳ್ಳಿ, ಹುಲಿತೊಟ್ಲು, ಸಿ.ಎನ್.ಮಾಳಿಗೆ ಮೂಲಕ ಸಂಚರಿಸುತ್ತಿದ್ದಾರೆ.

ದುಪ್ಪಟ್ಟು ದರ ಕೊಡಲು ತಕರಾರು: ದಾವಣಗೆರೆ ಹೊರವಲಯದ ಹೆಬ್ಬಾಳು ಟೋಲ್ ಪ್ಲಾಜಾದಲ್ಲಿ ಮಂಗಳವಾರ ಕೆಲವರು ಸಿಬ್ಬಂದಿ ಜೊತೆಗೆ ವಾಗ್ವಾದಕ್ಕಿಳಿದರು. ಫಾಸ್ಟ್ಯಾಗ್ ಇಲ್ಲದವರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂತು. ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ 800ಕ್ಕೂ ಹೆಚ್ಚು ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗಿದೆ.

ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯವರಿಗೆ ಬಿಳಿಯ ಬೋರ್ಡ್ ಇರುವ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಶುಲ್ಕ ದುಪ್ಪಟ್ಟಾಗಿರುವುದರಿಂದ ಹಲವರು ಪರ್ಯಾಯ ಮಾರ್ಗಗಳಲ್ಲಿ ಕಣ್ಣು ತಪ್ಪಿಸಿ ಸಂಚರಿಸುತ್ತಿದ್ದಾರೆ.

ಮೈಸೂರು- ಒಂದು ರಸ್ತೆ, ಎರಡು ಕಡೆ ಟೋಲ್ (ಮೈಸೂರು): ಕೇರಳ–ಕರ್ನಾಟಕ ಸಂಪರ್ಕಿಸುವ ಕೋಯಿಕ್ಕೋಡ್‌–ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಮೈಸೂರು ಜಿಲ್ಲೆಯಲ್ಲಿ ಹಾದು ಹೋಗಿದ್ದು, ಎರಡು ಕಡೆ ಟೋಲ್‌ ಸಂಗ್ರಹಿಸಲಾಗುತ್ತಿದೆ. ಫಾಸ್ಟ್ಯಾಗ್‌ ಕಡ್ಡಾಯಗೊಂಡ ಬೆನ್ನಲೇ ಟೋಲ್‌ ಸಿಬ್ಬಂದಿ ದರ ಪಟ್ಟಿ ತೆರವುಗೊಳಿಸಿದ್ದಾರೆ.ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ವಸೂಲಿ ಕ್ರಮ ಮಾತಿನ ಚಕಮಕಿಗೂ ಕಾರಣವಾಗಿದೆ.

ತಿ.ನರಸೀಪುರ ತಾಲ್ಲೂಕಿನ ಯಡದೊರೆ ಬಳಿಯೂ ಟೋಲ್‌ ಸಂಗ್ರಹ ಕೇಂದ್ರವಿದೆ. ಇಲ್ಲಿ ಚತುಷ್ಪಥ ರಸ್ತೆಯಲ್ಲದಿದ್ದರೂ, ಶುಲ್ಕ ಸಂಗ್ರಹಿಸಲು ಸ್ಥಳೀಯರಿಂದ ತೀವ್ರ ವಿರೋಧವಿದೆ. ಸ್ಥಳೀಯರಿಗೆ 20 ಕಿ.ಮೀ. ದೂರದವರೆಗೆ ಪಾಸ್‌ ಕೊಡಲಾಗಿದೆ.

ಸ್ಥಳೀಯ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯ: ಹಾಸನ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಶಾಂತಿಗ್ರಾಮದ ಟೋಲ್ ಪ್ಲಾಜಾದಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದಲ್ಲಿ ದುಪ್ಪಟ್ಟು ಹಣವಸೂಲಿ ಮಾಡಲಾಗುತ್ತಿದೆ.ಒಂದು ಪಥ ನಗದು, ಉಳಿದಿದ್ದನ್ನು ಫಾಸ್ಟ್ಯಾಗ್ ಪಥಗಳನ್ನಾಗಿ ನಿಗದಿ ಮಾಡಲಾಗಿದೆ.

ಸ್ಥಳೀಯರಿಗೂ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. 'ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದರಿಂದ ಶೇ 75 ವಾಹನಗಳಲ್ಲಿ ಸ್ಟಿಕ್ಕರ್ ಇದೆ. ಟೋಲ್ ಬಳಿಯೇ ವಾಹನ ಮಾಲೀಕರು ಅಗತ್ಯ ದಾಖಲೆಗಳನ್ನು ನೀಡಿ ಫಾಸ್ಟ್ಯಾಗ್ ಸ್ಟಿಕ್ಕರ್ ಪಡೆಯಬಹುದು. 'ಸ್ಥಳೀಯರಿಗೆ ಮೊದಲಿನಂತೆ ಗುರುತಿನ ಚೀಟಿ ತೋರಿಸಿದರೆ ಬಿಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುವುದು’ಎಂದು ಮಡೇನೂರು ನಿವಾಸಿ ಪ್ರದೀಪ್ ತಿಳಿಸಿದರು.

ದುಪ್ಪಟ್ಟು ಶುಲ್ಕ- ಟೋಲ್‌ ಸಿಬ್ಬಂದಿಯೊಂದಿಗೆ ವಾಗ್ವಾದ(ಹುಬ್ಬಳ್ಳಿ): ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿದದ್ದರಿಂದ ಹೆಚ್ಚಿನ ವಾಹನಗಳ ಮಾಲೀಕರು ದಂಡ ತೆರಬೇಕಾದ ಸ್ಥಿತಿ ಉತ್ತರ ಕನ್ನಡ, ವಿಜಯನಗರ, ಬೆಳಗಾವಿ ಜಿಲ್ಲೆಯ ಟೋಲ್‌ಗಳಲ್ಲಿ ಮಂಗಳವಾರ ಕಂಡು ಬಂತು. ಅಲ್ಲಲ್ಲಿ ವಾಗ್ವಾದವೂ ನಡೆಯಿತು.

ಕುಮಟಾ ತಾಲ್ಲೂಕಿನ ಹೊಳೆಗದ್ದೆ ಟೋಲ್‌ ಬಳಿ ವಾಗ್ವಾದದ ಕಾರಣ ಪೊಲೀಸ್‌ ಬಂದೋಬಸ್ತ್‌ ಇತ್ತು. ಫಾಸ್ಟ್ಯಾಗ್‌ ಕುರಿತ ಮಾಹಿತಿ ಇಲ್ಲದೆ ಹೊರ ಜಿಲ್ಲೆಗಳಿಂದ ಬಂದ ವಾಹನ ಸವಾರರು ಹಟ್ಟಿಕೇರಿ ಟೋಲ್ ಬಳಿ ಸಮಸ್ಯೆ ಎದುರಿಸುವಂತಾಯಿತು.

ಹೊಸಪೇಟೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಾಳ್‌, ಮರಿಯಮ್ಮನಹಳ್ಳಿಯ ಟೋಲ್‌ ಕೇಂದ್ರ, ಬೆಳಗಾವಿ ಜಿಲ್ಲೆಯ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಿರೇಬಾಗೇವಾಡಿ ಮತ್ತು ಹತ್ತರಗಿ ಟೋಲ್‌ ಪ್ಲಾಜಾ, ನಿಪ್ಪಾಣಿ ತಾಲ್ಲೂಕಿನ ಕೊಗನೋಳಿಯ ಟೋಲ್‌ನಲ್ಲಿಯೂ ಬಹುತೇಕ ಇಂಥದೇ ಸ್ಥಿತಿ ಕಂಡುಬಂದಿತು.

ಹುಬ್ಬಳ್ಳಿ ಹೊರವಲಯದ ಗಬ್ಬೂರ್ ಬೈಪಾಸ್‌ನಲ್ಲಿ ಎಂದಿನಂತೆ ದರ ಪಡೆಯಲಾಯಿತು. ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಟೋಲ್‌ನಲ್ಲಿ ಕೆಆರ್‌ಡಿಸಿಎಲ್‌ ಫಾಸ್ಟ್ಯಾಗ್ ವ್ಯವಸ್ಥೆ ಕಲ್ಪಿಸಿಲ್ಲ. ಡಂಬಳ ಸಮೀಪದ ಪಾಪನಾಶಿ ಟೋಲ್‌ನಲ್ಲಿ ಬಹುತೇಕ ವಾಹನ ಚಾಲಕರು ಫಾಸ್ಟ್ಯಾಗ್‌ ಬಳಕೆ ಮಾಡುತ್ತಿಲ್ಲ.

ವಿನಾಯಿತಿಗೆ ಸ್ಥಳೀಯರ ಪಟ್ಟು
ಮಂಗಳೂರು: ಫಾಸ್ಟ್ಯಾಗ್ ಕಡ್ಡಾಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯರಿಗೆ ವಿನಾಯಿತಿನೀಡಲು ಆಗ್ರಹಿಸಿ ಉಡುಪಿ ಜಿಲ್ಲೆಯ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ ಪ್ಲಾಜಾ ಬಳಿ ಪ್ರತಿಭಟನೆ ನಡೆದವು.

ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ, ಬ್ರಹ್ಮರಕೂಟ್ಲು ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರಿಂದ ದುಪ್ಪಟ್ಟು ಶುಲ್ಕ ಸಂಗ್ರಹಿಸಲಾಯಿತು. ಸುರತ್ಕಲ್‌ ಟೋಲ್‌ನಲ್ಲಿ ಸ್ಥಳೀಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಮಂಗಳವಾರ ಯಾವುದೇ ತೊಂದರೆ ಆಗಿಲ್ಲ.

ಫಾಸ್ಟ್ಯಾಗ್ ಇಲ್ಲದ್ದರಿಂದ ವಾಹನಗಳ ಸರದಿ ಕಂಡುಬಂತು. ಟೋಲ್‌ಗೇಟ್‌ಗಳ ಬಳಿ ವಿವಿಧ ಕಂಪನಿಗಳು ಹಾಗೂ ಹೆದ್ದಾರಿ ಪ್ರಾಧಿಕಾರದಿಂದ ಫಾಸ್ಟ್ಯಾಗ್ ವಿತರಣೆಗೆ ಕೌಂಟರ್‌ ತೆರೆಯಲಾಗಿದೆ. ‘ಶೇ 30ರಷ್ಟು ವಾಹನಗಳು ಫಾಸ್ಟ್ಯಾಗ್ ಅಳವಡಿಸಿಲ್ಲ. ಫಾಸ್ಟ್ಯಾಗ್‌ ಒದಗಿಸಿ ನಗದು ರಹಿತ ವ್ಯವಸ್ಥೆಗೆ ಕ್ರಮವಹಿಸಲಾಗುತ್ತಿದೆ’ ಎಂದು ನವಯುಗ್‌ ಉಡುಪಿ ಟೋಲ್‌ ವ್ಯವಸ್ಥಾಪಕ ಶಿವಪ್ರಸಾದ್‌ ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.