ADVERTISEMENT

₹ 25 ಲಕ್ಷ ದುರುಪಯೋಗ: ಎಫ್‌ಡಿಎಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:14 IST
Last Updated 4 ಅಕ್ಟೋಬರ್ 2019, 20:14 IST

ಬೆಂಗಳೂರು: ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಅವರ ನಕಲಿ ಸಹಿ ಬಳಸಿ ಬ್ಯಾಂಕ್‌ ಖಾತೆಯಿಂದ ಚೆಕ್‌ ಮೂಲಕ ₹ 25 ಲಕ್ಷ ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದ ಅಪರಾಧಿ ಶಿವಪ್ರಸಾದ್ (47) ಎಂಬಾತನಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 24.15 ಲಕ್ಷ ದಂಡ ವಿಧಿಸಿ ನಗರದ ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಪರಾಧಿ ಶಿವಪ್ರಸಾದ್,ಜಿಲ್ಲಾ ಗೃಹರಕ್ಷಕ ದಳದ ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಆಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ 2014ರಲ್ಲಿ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

‘ಕಚೇರಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಶಿವಪ್ರಸಾದ್, ಕಮಾಂಡೆಂಟ್‌ ಅವರ ಹೆಸರಿನ ಬ್ಯಾಂಕ್‌ ಖಾತೆಯಿಂದಲೇ ಚೆಕ್‌ ಮೂಲಕ ಹಣ ಡ್ರಾ ಮಾಡಿಕೊಂಡಿದ್ದ. ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ. ಸಂಸ್ಥೆಗೆ ನಂಬಿಕೆದ್ರೋಹ ಹಾಗೂ ವಂಚನೆ ಮಾಡಿದ್ದ’ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಪ್ರಕರಣದ ತನಿಖೆ ನಡೆಸಿದ್ದ ಸಿಐಡಿಯ ಅಂದಿನ ಡಿವೈಎಸ್ಪಿ ಕೆ. ಪುರುಷೋತ್ತಮ್ ಹಾಗೂ ಇನ್‌ಸ್ಪೆಕ್ಟರ್ ಮೊಹಮ್ಮದ್ ಅಲಿ ಅವರ ವಿಶೇಷ ತಂಡ, ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಡಿ. ರಮೇಶ್ ಬಾಬು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.