ADVERTISEMENT

‘ಎಫ್‌ಡಿಎ’ ನಕಲಿ ಆದೇಶ: ಅರೆಕಾಲಿಕ ಉಪನ್ಯಾಸಕ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 16:13 IST
Last Updated 15 ಅಕ್ಟೋಬರ್ 2021, 16:13 IST
   

ಬೆಂಗಳೂರು: ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು, ನೇಮಕಾತಿಯ ನಕಲಿ ಆದೇಶ ಪ್ರತಿ ನೀಡಿ ವಂಚಿಸಿದ್ದ ಆರೋಪದಡಿ ನಾಗರಾಜು ಅಲಿಯಾಸ್ ಸುರೇಶ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

‘ಮೈಸೂರಿನ ನಾಗರಾಜು, ಸ್ಥಳೀಯ ಕಾಲೇಜೊಂದರಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ಎನ್. ಪದ್ಮಿನಿ ನೀಡಿದ್ದ ದೂರಿನನ್ವಯ ನಾಗರಾಜು ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೈಸೂರಿನ ನಿವಾಸಿ ಎಸ್‌.ಎಲ್‌. ಪಲ್ಲವಿ ಎಂಬುವರು ಬೆಂಗಳೂರಿನ ಎಂ.ಎಸ್. ಬಿಲ್ಡಿಂಗ್‌ನ 6ನೇ ಮಹಡಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಅ. 5ರಂದು ಬೆಳಿಗ್ಗೆ ಬಂದಿದ್ದರು. ’ಮೈಸೂರು ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮದರ್ಜೆ ಸಹಾಯಕಿ (ಎಫ್‌ಡಿಎ) ಹುದ್ದೆಗೆ ನಾನು ನೇಮಕವಾಗಿದ್ದು, ದಾಖಲೆ ಪರಿಶೀಲನೆಗೆ ಬಂದಿದ್ದೇನೆ’ ಎಂಬುದಾಗಿ ಅವರು ಹೇಳಿದ್ದರು. ತಮ್ಮ ಬಳಿ ಇದ್ದ ನೇಮಕಾತಿ ಆದೇಶ ಪ್ರತಿಯನ್ನೂ ಅಧಿಕಾರಿಗಳಿಗೆ ತೋರಿಸಿದ್ದರು.’

ADVERTISEMENT

‘ಆದೇಶ ಪ್ರತಿ ಪರಿಶೀಲಿಸಿದ್ದ ಅಧಿಕಾರಿಗಳು, ಅದು ನಕಲಿ ಆದೇಶ ಎಂಬುದನ್ನು ಪತ್ತೆ ಮಾಡಿದ್ದರು. ನೇಮಕಾತಿಯ ನಕಲಿ ಆದೇಶ ಪ್ರತಿ ಸಮೇತ ಪದ್ಮಿನಿ ಅವರು ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

₹ 6 ಲಕ್ಷ ಪಡೆದಿದ್ದ ಆರೋಪಿ: ‘ಆದೇಶ ಪ್ರತಿ ಸಂಬಂಧ ಪಲ್ಲವಿ ಅವರನ್ನು ವಿಚಾರಣೆ ನಡೆಸಲಾಗಿತ್ತು. ‘ಎಫ್‌ಡಿಎ ಕೆಲಸ ಕೊಡಿಸುವುದಾಗಿ ಹೇಳಿದ್ದ ನಾಗರಾಜು ಎಂಬಾತ, ಅದಕ್ಕಾಗಿ ₹ 6 ಲಕ್ಷ ಪಡೆದಿದ್ದ. ಆತನೇ ನಕಲಿ ಆದೇಶ ಪ್ರತಿ ನೀಡಿದ್ದ’ ಎಂಬುದಾಗಿ ಅವರು ಹೇಳಿಕೆ ನೀಡಿದ್ದರು. ಕೃತ್ಯದಲ್ಲಿ ಅವರ ತಪ್ಪಿಲ್ಲವೆಂಬುದು ತಿಳಿಯಿತು’ ಎಂದು ಪೊಲೀಸ್ ಮೂಲಗಳು ವಿವರಿಸಿವೆ.

‘ಪದ್ಮಿನಿ ಹಾಗೂ ಪಲ್ಲವಿ ಹೇಳಿಕೆ ಆಧರಿಸಿ ಆರೋಪಿ ನಾಗರಾಜು ಅವರನ್ನು ಸೆರೆ ಹಿಡಿಯಲಾಗಿದೆ. ಈತ ಮತ್ತಷ್ಟು ಮಂದಿಯನ್ನು ವಂಚಿಸಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.