ಬೆಂಗಳೂರು: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಆಂಧ್ರ ಪ್ರದೇಶದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕದ ಗರ್ಭಿಣಿಯರು ನೆರೆಯ ರಾಜ್ಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂ ಮೇಲೆ ಕರ್ನಾಟಕ ಮತ್ತು ಆಂಧ್ರದ ವೈದ್ಯರ ತಂಡ ಕಾರ್ಯಾಚರಣೆ ನಡೆಸಿದಾಗ, ಭ್ರೂಣ ಹತ್ಯೆ ನಡೆಸುತ್ತಿರುವುದು ಖಚಿತಪಟ್ಟಿದೆ.
ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಮಂಡ್ಯ ಜಿಲ್ಲೆ ಮಳವಳ್ಳಿಯ 30 ವರ್ಷದ ಮಹಿಳೆ ಅಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳಲು ಮುಂದಾಗಿದ್ದರು. ರಾಜ್ಯದ ‘ಪಿಸಿ ಆ್ಯಂಡ್ ಪಿಎನ್‌ಡಿಟಿ’ಯ ನೋಡಲ್ ಅಧಿಕಾರಿ ಡಾ. ವಿವೇಕ್ ದೊರೈ ಹಾಗೂ ಆಂಧ್ರಪ್ರದೇಶದ ಡಾ.ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ನೇತೃತ್ವದ ತಂಡ ಇದೇ 21ರಂದು ಈ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆ ಬಗ್ಗೆ ವಿವರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಮಳವಳ್ಳಿಯ 30 ವರ್ಷದ ಮಹಿಳೆ ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಕಾರಣ, ಅಕ್ರಮವಾಗಿ ಏಜೆಂಟ್ ಮೂಲಕ ಭ್ರೂಣ ಲಿಂಗ ಪತ್ತೆ ಮಾಡಿಸಿಕೊಂಡಿದ್ದರು. ಆ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಇನ್ನೊಂದು ಮಗುವು ಹೆಣ್ಣು ಎನ್ನುವುದು ತಿಳಿದ ಕಾರಣ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದರು. ಈ ಏಜೆಂಟ್‌ನನ್ನು ಪತ್ತೆ ಮಾಡಿದ ಇಲಾಖೆ ಅಧಿಕಾರಿಗಳು, ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.
‘ಈ ಕಾರ್ಯಾಚರಣೆಯಲ್ಲಿ ಕಟುಕರನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಸರ್ಕಾರ, ಇಲಾಖೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗೃತವಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದು ಹಾಕಲು ಸಾಮಾಜಿಕ ಬದಲಾವಣೆ ಮುಖ್ಯ’ ಎಂದಿದ್ದಾರೆ.
ಭ್ರೂಣ ಹತ್ಯೆ ತಡೆಗೆ ಕಾನೂನಿನಡಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲಾಖೆ ವತಿಯಿಂದಲೂ ರಹಸ್ಯ ಕಾರ್ಯಾಚರಣೆ ನಡೆಸಿ ಭ್ರೂಣ ಹತ್ಯೆ ಮಾಡುವವರನ್ನು ಪತ್ತೆ ಮಾಡಲಾಗುತ್ತಿದೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.