ADVERTISEMENT

ರಸಗೊಬ್ಬರ ಕೊರತೆ: ಕೇಂದ್ರದ ಮೇಲೆ ಒತ್ತಡ ಹೇರಿ; ಕೃಷಿಕ ಸಮಾಜ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 14:26 IST
Last Updated 1 ಆಗಸ್ಟ್ 2025, 14:26 IST
<div class="paragraphs"><p>ರಸಗೊಬ್ಬರ</p></div>

ರಸಗೊಬ್ಬರ

   

ಬೆಂಗಳೂರು: ‘ಉತ್ತಮ ಮುಂಗಾರಿನಿಂದಾಗಿ ರಾಜ್ಯದಲ್ಲಿ ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಕೊರತೆ ಇರುವ 1.36 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಪೂರೈಸುವಂತೆ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್‌ಗೌಡ ಎಸ್.ಆರ್, ‘ಈ ಬಾರಿ ಹವಾಮಾನ ವೈಪರೀತ್ಯದಿಂದ ಮುಂಚಿತವಾಗಿ ಮಳೆ ಆರಂಭವಾಗಿದೆ. ಇದರಿಂದಾಗಿ ರಸಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗಿದೆ. ಕೆಲ ಜಿಲ್ಲೆಗಳಲ್ಲಿ ಯೂರಿಯಾ ಲಭ್ಯತೆಯ ಬಗ್ಗೆ ರೈತರಲ್ಲಿ ಆತಂಕ ಮೂಡಿದೆ. ರಾಜ್ಯ ಸರ್ಕಾರವು ಈವರೆಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ, ಅಗತ್ಯ ಇರುವ ರಸಗೊಬ್ಬರ ಸರಬರಾಜಿಗೆ ಎಲ್ಲ ಕ್ರಮ ವಹಿಸುತ್ತಿದೆ’ ಎಂದು ತಿಳಿಸಿದರು. 

ADVERTISEMENT

‘ರಾಜ್ಯದಲ್ಲಿ ಈ ವರ್ಷ ಕೃಷಿ ಚಟುವಟಿಕೆಗಳಿಗೆ ವಾತಾವರಣ ಆಶಾದಾಯಕವಾಗಿದೆ. ಮುಸುಕಿನ ಜೋಳವನ್ನು ಹೆಚ್ಚುವರಿಯಾಗಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆದ್ದರಿಂದ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಕೊರತೆ ಇರುವ ರಸಗೊಬ್ಬರದ ಪೂರೈಕೆಗೆ ಸಂಬಂಧಿಸಿದಂತೆ ಸಂಸದರು ಪಕ್ಷಬೇಧ ಮರೆತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು. 

‘ಮೇಲುಗೊಬ್ಬರವಾಗಿ ಯೂರಿಯಾ ಬದಲು, ನ್ಯಾನೊ ಯೂರಿಯಾ ಬಳಸಿದಲ್ಲಿ ಗೊಬ್ಬರದ ಕೊರತೆ ನೀಗಿಸಬಹುದು’ ಎಂದು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.