ADVERTISEMENT

ಬೆಂಗಳೂರಿನಲ್ಲಿ 31 ಫಿವರ್ ಕ್ಲಿನಿಕ್‌ಗಳು ಪ್ರಾರಂಭ

ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:18 IST
Last Updated 29 ಮಾರ್ಚ್ 2020, 20:18 IST
ವಿದ್ಯಾಪೀಠದಲ್ಲಿ ಪ್ರಾರಂಭಿಸಲಾಗಿರುವ ಫೀವರ್ ಕ್ಲಿನಿಕ್‌ನಲ್ಲಿ ವ್ಯಕ್ತಿಯೊಬ್ಬರನ್ನು ತಪಾಸಣೆ ಮಾಡುತ್ತಿರುವುದು -ಪ್ರಜಾವಾಣಿ ಚಿತ್ರ
ವಿದ್ಯಾಪೀಠದಲ್ಲಿ ಪ್ರಾರಂಭಿಸಲಾಗಿರುವ ಫೀವರ್ ಕ್ಲಿನಿಕ್‌ನಲ್ಲಿ ವ್ಯಕ್ತಿಯೊಬ್ಬರನ್ನು ತಪಾಸಣೆ ಮಾಡುತ್ತಿರುವುದು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಅನಾರೋಗ್ಯ ಸಮಸ್ಯೆಗೆ ಒಳಗಾದವರನ್ನು ಪರೀಕ್ಷೆಗೆ ಒಳಪಡಿಸುವ ‘ಫಿವರ್ ಕ್ಲಿನಿಕ್’ಗಳು ನಗರದ ವಿವಿಧೆಡೆ ಭಾನುವಾರ ಕಾರ್ಯ ಆರಂಭಿಸಿವೆ.

ವಿದೇಶಗಳಿಂದ ಬಂದವರು ಹಾಗೂ ಅವರೊಂದಿಗೆ ನೇರ ಸಂಪರ್ಕ ಹೊಂದಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಒಟ್ಟು ಕೋವಿಡ್‌–19 ಪ್ರಕರಣಗಳಲ್ಲಿ ಅರ್ಧದಷ್ಟು ನಗರದಲ್ಲಿಯೇ ವರದಿಯಾಗಿವೆ. ಇದರಿಂದಾಗಿ ಸಾಮಾನ್ಯ ಅನಾರೋಗ್ಯ ಸಮಸ್ಯೆಗೆ ಒಳಗಾದವರೂ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ತೆರಳಿ, ಕೋವಿಡ್–19 ಪರೀಕ್ಷೆಗೆ ಒತ್ತಾಯಿಸಿದ ಪರಿಣಾಮ ರೋಗಿಗಳ ದಟ್ಟಣೆ ಉಂಟಾಗಿತ್ತು. ಜನರಲ್ಲಿನ ಆತಂಕ ದೂರ ಮಾಡುವ ಉದ್ದೇಶದಿಂದ ಬಿಬಿಎಂಪಿ ನಗರದಲ್ಲಿ 31 ಫಿವರ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಿದೆ.

ಬೆಳಿಗ್ಗೆ 9ಗಂಟೆಯಿಂದ ಸಂಜೆ 4.30ರ ವರೆಗೆ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಜ್ವರ, ಕೆಮ್ಮು, ಶೀತ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗೆ ಪರೀಕ್ಷೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ರೆಫರಲ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಬಂದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಸೋಂಕು ತಗುಲಿದೆಯೇ ಎನ್ನುವುದನ್ನು ಪತ್ತೆ ಮಾಡಲಾಗುತ್ತದೆ. ಪ್ರತಿ ಕ್ಲಿನಿಕ್‌ಗೂ ವೈದ್ಯಾಧಿಕಾರಿ, ಶುಶ್ರೂಷಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ರೋಗಿಗಳನ್ನು ಪರೀಕ್ಷೆ ಮಾಡುವವರಿಗೆ ಸುರಕ್ಷಾ ಸಾಧನಗಳ (ಪಿಪಿಇ) ಕಿಟ್‌ಗಳನ್ನು ನೀಡಲಾಗಿದೆ.

ADVERTISEMENT

ಜನರಿಗೆ ಜಾಗೃತಿ: ಸೋಂಕು ನಿವಾರಕದಿಂದ ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಬಗ್ಗೆ ತಿಳಿಸುವ ಜತೆಗೆ ಕೊರೊನಾ ಸೊಂಕು ಬರದಂತೆ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮಗಳನ್ನು ತಿಳಿಸಲಾಗುತ್ತಿದೆ. ರೋಗ ಲಕ್ಷಣವನ್ನು ಆಧರಿಸಿ ಅಗತ್ಯ ಔಷಧಿಗಳನ್ನು ನೀಡಿ, ವಾಸಿಯಾಗದಿದ್ದಲ್ಲಿ ಸಂಪರ್ಕಿಸುವಂತೆ ವೈದ್ಯರು ಸೂಚಿಸುತ್ತಿದ್ದಾರೆ. ಕ್ಲಿನಿಕ್‌ಗೆ ಬಂದವರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ. ಶ್ರೀರಾಮಪುರ, ಗೌರಿಪಾಳ್ಯದ ರೆಫರಲ್ ಚಿಕಿತ್ಸಾ ಕೇಂದ್ರ, ಯಶವಂತಪುರ, ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿರುವ ಇಂದಿರಾ ಕ್ಲಿನಿಕ್, ಕೊದಂಡಪುರ, ಮಹಾಲಕ್ಷ್ಮಿ ಲೇಔಟ್, ಜೆ.ಪಿ.ನಗರ, ವಿದ್ಯಾಪೀಠ, ಕೆ.ಜಿ. ಹಳ್ಳಿ, ಬನಶಂಕರಿ, ಹಲಸೂರು, ಕೋಡಿಹಳ್ಳಿ, ಲಗ್ಗೇರೆ, ಮಾರತಹಳ್ಳಿ, ಕೋಣನಕುಂಟೆ, ಕೆ.ಆರ್.ಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ನಗರದ ವಿವಿಧೆಡೆ ಫಿವರ್ ಕ್ಲಿನಿಕ್ ಕಾರ್ಯಾರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.