ADVERTISEMENT

ಟೋಯಿಂಗ್ ವೇಳೆ ಜಟಾಪಟಿ; ಸಿಬ್ಬಂದಿ ತಲೆಗೆ ಹೆಲ್ಮೆಟ್‌ನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 6:26 IST
Last Updated 30 ಜುಲೈ 2021, 6:26 IST
   

ಬೆಂಗಳೂರು: ನಗರದಲ್ಲಿ ವಾಹನಗಳ ಟೋಯಿಂಗ್ ವೇಳೆ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಇದೇ ಸಂದರ್ಭದಲ್ಲೇ ಟೋಯಿಂಗ್ ವಾಹನದ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

ಯಲಹಂಕ ನ್ಯೂ ಟೌನ್‌ ಬಳಿ ಸುತ್ತಾಡಿದ್ದ ಸಂಚಾರ ಪೊಲೀಸರು, ರಸ್ತೆ ಪಕ್ಕ– ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡಲಾರಂಭಿಸಿದ್ದರು. ಸ್ಥಳದಲ್ಲಿ ಯಾವುದೇ ನೋ ಪಾರ್ಕಿಂಗ್ ಫಲಕವಿರಲಿಲ್ಲ. ಅದನ್ನು ಪ್ರಶ್ನಿಸಿದ್ದ ಸಾರ್ವಜನಿಕರು, ಫಲಕವಿಲ್ಲದ ಜಾಗದಿಂದ ವಾಹನ ಟೋಯಿಂಗ್ ಮಾಡದಂತೆ ಹೇಳಿದ್ದರು.

ಅಷ್ಟಕ್ಕೆ ಕೋಪಗೊಂಡ ಪೊಲೀಸರು ಹಾಗೂ ಸಿಬ್ಬಂದಿ, ವಾಹನಗಳನ್ನು ಎಳೆದುಕೊಂಡು ಟೋಯಿಂಗ್ ವಾಹನದಲ್ಲಿ ಇರಿಸಲು ಮುಂದಾಗಿದ್ದರು. ಅದೇ ಸಂದರ್ಭದಲ್ಲೇ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಕ್ರೋಶಗೊಂಡ ಜನರ ಗುಂಪು, ಟೋಯಿಂಗ್ ವಾಹನ ಏರಿ ಸಿಬ್ಬಂದಿ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾರೆ. ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

‘ಸುಖಾಸುಮ್ಮನೇ ಜನರಿಗೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಫಲಕ ಇಲ್ಲದ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದರು. ಹಲವು ಬಾರಿ ವಿರೋಧಿಸಿದರೂ ಪ್ರಯೋಜನವಾಗಿಲ್ಲ. ಬುಧವಾರ ಟೋಯಿಂಗ್ ಮಾಡಲು ಬಂದಿದ್ದಾಗ ಗಲಾಟೆ ಆಯಿತು’ ಎಂದು ಸ್ಥಳೀಯರೊಬ್ಬರು ಹೇಳಿದರು.

ಪೊಲೀಸ್ ಅಧಿಕಾರಿಯೊಬ್ಬರು, ‘ಟೋಯಿಂಗ್ ಸಿಬ್ಬಂದಿ ತಪ್ಪು ಮಾಡಿದರೆ ದೂರು ನೀಡಬಹುದಿತ್ತು. ಹಲ್ಲೆ ಮಾಡಿರುವುದು ಅಪರಾಧ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.