ADVERTISEMENT

ಬ್ಯಾಂಕ್ ಉದ್ಯೋಗಿ–ಉಬರ್ ಚಾಲಕನ ಕಿತ್ತಾಟ

ಮಾರ್ಗ ಬದಲಿಸಿದ್ದಕ್ಕೆ ಜಗಳ * ಅಪಹರಣ ಪ್ರಕರಣ ದಾಖಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST

ಬೆಂಗಳೂರು: ಮಾರ್ಗ ಬದಲಿಸಿದ ವಿಚಾರಕ್ಕೆ ದೆಹಲಿಯ ಬ್ಯಾಂಕ್ ಉದ್ಯೋಗಿ ಹಾಗೂ ಉಬರ್ ಕ್ಯಾಬ್ ಚಾಲಕನ ನಡುವೆ ಮಂಗಳವಾರ ರಾತ್ರಿ ಜಗಳ ನಡೆದಿದ್ದು, ಈ ಸಂಬಂಧ ಕೆಐಎಎಲ್ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ.

‘ಚಾಲಕ ನನ್ನನ್ನು ಅಪಹರಿಸಲು ಯತ್ನಿಸಿದ’ ಎಂದು ಬ್ಯಾಂಕ್ ಉದ್ಯೋಗಿ ಜೈ ಸಿಂಘಾಲ್ ಆರೋಪಿಸಿದ್ದಾರೆ. ಆದರೆ, ‘₹120 ಶುಲ್ಕ ಉಳಿಸಲೆಂದು ಹೊಸ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಅಷ್ಟಕ್ಕೇ ಗಲಾಟೆ ತೆಗೆದು, ಕ್ಯಾಬ್ ಇಳಿದು ಹೊರಟು ಹೋದರು’ ಎಂದು ಚಾಲಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ಫೇಸ್‌ಬುಕ್‌ನಲ್ಲಿ ಬರೆದದ್ದು: ‘ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದ ನಾನು, ಆ.28ರ ರಾತ್ರಿ 12.20ಕ್ಕೆ ಕೆಐಎಎಲ್‌ಗೆ ಬಂದಿಳಿದೆ. ಕೋರಮಂಗಲಕ್ಕೆ ಹೋಗಲು ಉಬರ್ ಕ್ಯಾಬ್ ಬುಕ್ ಮಾಡಿದೆ. 12.47ಕ್ಕೆ ಚಾಲಕ ಬಂದು ನನ್ನನ್ನು ಕರೆದುಕೊಂಡು ಹೊರಟ. 1 ಕಿ.ಮೀ ದೂರ ಹೋಗುತ್ತಿದ್ದಂತೆಯೇ ಆತ ಹೆಚ್ಚಿನ ಪ್ರಯಾಣ ದರ ಪಾವತಿಸುವಂತೆ ಕೇಳಿದ. ಆ ವಿಚಾರಕ್ಕೆ ವಾಗ್ವಾದ ನಡೆಯಿತು’ ಎಂದು ಜೈಸಿಂಘ್ವಾಲ್ ಬರೆದುಕೊಂಡಿದ್ದಾರೆ.

ADVERTISEMENT

‘ಹೆಚ್ಚಿನ ದರ ಕೊಡುವುದಕ್ಕೆ ನಿರಾಕರಿಸಿದ ನಾನು, ಏರ್‌ಪೋರ್ಟ್‌ಗೆ ವಾಪಸ್ ಕರೆದುಕೊಂಡು ಹೋಗುವಂತೆ ಹೇಳಿದೆ. ಇದರಿಂದ ಸಿಟ್ಟಾದ ಆತ, ಯಾರಿಗೋ ಕರೆ ಮಾಡಿ ಕನ್ನಡದಲ್ಲಿ ಮಾತನಾಡುತ್ತಿದ್ದ. ನನಗೆ ಕನ್ನಡ ಬಾರದಿದ್ದರೂ, ಇದೇ ವಿಚಾರ ಮಾತನಾಡುತ್ತಿದ್ದಾನೆ ಎಂಬುದು ಅರ್ಥವಾಯಿತು. ಆ ನಂತರ ಮಂತ್ರಿ ವೃತ್ತದಲ್ಲಿ ಎಡತಿರುವು ತೆಗೆದುಕೊಂಡು, ಬೇಗೂರು ರಸ್ತೆ ಕಡೆಗೆ ಕಾರು ತಿರುಗಿಸಿದ.’

‌‘ಸ್ವಲ್ಪ ಸಮಯದಲ್ಲೇ ಎರಡು ಕಾರುಗಳು ಅಲ್ಲಿಗೆ ಬಂದವು. ಅಪಹರಿಸಲು ಯತ್ನಿಸುತ್ತಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆಯೇ ಕಾರಿನಿಂದ ಜಿಗಿದು ಓಡಲಾರಂಭಿಸಿದೆ. ಹಿಂಬಾಲಿಸಿ ಬಂದ ಚಾಲಕರು, ನಾನು ಸಂಚಾರ ಪೊಲೀಸರ ಹತ್ತಿರ ಹೋಗುತ್ತಿದ್ದಂತೆಯೇ ಹೊರಟು ಹೋದರು. ನಂತರ ಕೆಐಎಎಲ್ ಠಾಣೆಗೆ ತೆರಳಿ ಚಾಲಕ ಹಾಗೂ ಉಬರ್ ಕಂಪನಿ ವಿರುದ್ಧ ದೂರು ಕೊಟ್ಟೆ’ ಎಂದು ವಿವರಿಸಿದ್ದಾರೆ.

ಚಾಲಕ ಅಮಾಯಕ: ‘ಈ ಚಾಲಕ ಒಂದೂವರೆ ವರ್ಷದಿಂದ ತಮ್ಮ ಬಳಿ ಕೆಲಸ ಮಾಡುತ್ತಿದ್ದು, ‘ಈತನ ನಡತೆ ಸರಿಯಿಲ್ಲ’ ಎಂದು ಯಾವೊಬ್ಬ ಪ್ರಯಾಣಿಕರು ದೂರಿಲ್ಲ ಎಂದು ಕಂಪನಿ ಆಡಳಿತ ಮಂಡಳಿ ಹೇಳಿದೆ. 20ಕ್ಕೂ ಹೆಚ್ಚು ಇತರೆ ಚಾಲಕರ ಬಗ್ಗೆಯೂ ಈತನ ನಡತೆ ಬಗ್ಗೆ ವಿಚಾರಿಸಲಾಗಿದ್ದು, ಅಮಾಯಕ ಎಂಬ ಉತ್ತರವೇ ಸಿಕ್ಕಿದೆ’ ಎಂದು ಕೆಐಎಎಲ್ ಪೊಲೀಸರು ಹೇಳಿದರು.

‘ಚಾಲಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಳ್ಳಿ ಎಂದು ಜೈ ಸಿಂಘ್ವಾಲ್ ಪಟ್ಟು ಹಿಡಿದಿದ್ದರು. ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಮಾತಿನ ಚಕಮಕಿಯ ವಿಡಿಯೊ ಪರಿಶೀಲಿಸಿದಾಗ, ಚಾಲಕನ ತಪ್ಪಿಲ್ಲ ಎಂಬುದು ಸ್ಪಷ್ಟವಾಯಿತು. ಹೀಗಾಗಿ, ಅಪಹರಣ ಪ್ರಕರಣ ದಾಖಲಿಸಲು ನಿರಾಕರಿಸಿದೆವು. ವಿಚಾರಣೆ ಪ್ರಗತಿಯಲ್ಲಿದ್ದು, ಕಾನೂನು ತಜ್ಞರ ನೆರವು ಕೋರಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.